ಮೈಸೂರು: ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿರುವ ಪಾರಂಪರಿಕ ಕಟ್ಟಡವಾದ ಜಯಲಕ್ಷ್ಮಿ ವಿಲಾಸ ಅರಮನೆಯ ಮುಂಭಾಗ ಹೊಸ ಸಿನಿಮಾ ಶೂಟಿಂಗ್ ಮಾಡುವಾಗ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿರುವ ಪಾರಂಪರಿಕ ಕಟ್ಟಡವಾದ ಜಯಲಕ್ಷ್ಮಿ ವಿಲಾಸ ಅರಮನೆಯ ಮುಂಭಾಗದಲ್ಲಿ ಹೊಸ ಸಿನಿಮಾ ಶೂಟಿಂಗ್ಗೆ 19 ನಿಬಂಧನೆಗಳನ್ನು ಹಾಕಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಸಿನಿಮಾ ಶೂಟಿಂಗ್ ಮಾಡುವವರು 10ಕ್ಕೂ ಹೆಚ್ಚು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಬೆಳಗ್ಗೆ ಗಂಗೋತ್ರಿ ಆವರಣದಲ್ಲಿ ವಾಕಿಂಗ್ ಮಾಡುವ ಹಿರಿಯರು ಹಾಗೂ ಪಾರಂಪರಿಕ ತಜ್ಞರಾದ ಪ್ರೊ. ರಂಗರಾಜ್, ಜಯಲಕ್ಷ್ಮಿ ವಿಲಾಸ ಅರಮನೆಯ ಮುಂಭಾಗದಲ್ಲಿ ಇರುವ ಪರಿಸ್ಥಿತಿಯನ್ನು ಕಂಡು, ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಜೊತೆ ಮಾತನಾಡಿದಾಗ, ಸಿನಿಮಾ ಶೂಟಿಂಗ್ಗಾಗಿ ಜಯಲಕ್ಷ್ಮಿ ವಿಲಾಸ ಅರಮನೆಯ ಪಾರಂಪರಿಕ ಕಟ್ಟಡದ ಮುಂಭಾಗದಲ್ಲಿ ಕೆಮ್ಮಣ್ಣು ತುಂಬಿ ಹಾಳು ಮಾಡಿದ್ದಾರೆ. ಸುತ್ತಮುತ್ತ ಇರುವ 25 ಗಂಧದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಪ್ರೊ. ರಂಗರಾಜು ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಪ್ರೊ.ರಂಗರಾಜು ಹೇಳಿದ್ದೇನು: ಜಯಲಕ್ಷ್ಮಿ ವಿಲಾಸ ಅರಮನೆ ಪಾರಂಪರಿಕ ಕಟ್ಟಡವಾಗಿದ್ದು, ಮೈಸೂರು ನಗರದಲ್ಲಿರುವ 300ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಲ್ಲಿ ಇದು ಒಂದು. ರಾಜಮಾತೆ ಜಯಲಕ್ಷ್ಮಿ ಅಮ್ಮಣ್ಣಿ ಅವರು ಇಲ್ಲಿ ವಾಸವಿದ್ದರು. ರಾಜಮಾತೆ ಅಮ್ಮಣ್ಣಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಿರಿಅಕ್ಕ. 1959ರಲ್ಲಿ ಕುವೆಂಪು ಅವರು ಇದರ ವೈಸ್ ಚಾನ್ಸಲರ್ ಆಗಿದ್ದಾಗ ಮಲ್ಲಿಕಾರ್ಜುನಯ್ಯ ಅನ್ನುವವರು ರಿಜಿಸ್ಟ್ರಾರ್ ಆಗಿದ್ದರು. ಆಗ ಇದನ್ನು ಮೈಸೂರು ವಿಶ್ವವಿದ್ಯಾನಿಲಯದ ಮುತಿವರ್ಜಿಗೆ ತೆಗೆದುಕೊಂಡರು. 350ಎಕರೆ ಜಾಗವನ್ನು ಕೇವಲ 10 ಲಕ್ಷ ರೂಪಾಯಿಗಳಿಗೆ ಮೈಸೂರು ಅರಸರು ಕೊಟ್ಟಿದ್ದರು. 1962ರಲ್ಲಿ ರಾಷ್ಟ್ರಪತಿ ಆಗಿದ್ದ ಡಾ. ರಾಧಾಕೃಷ್ಣನ್ ಅವರು ಬಂದು ಇದರ ಉದ್ಘಾಟನೆ ಮಾಡಿದ್ದರು. ಇದರ ಸಂಪೂರ್ಣ ಸುಧಾರಣೆಯನ್ನು ವೈಜ್ಞಾನಿಕವಾಗಿ ಮಾಡಿಸಿದ್ದು ತಾವು ಎಂದು ಹೇಳಿದರು.
ಇದನ್ನು ಮೊದಲ ಬಾರಿ ಶೂಟಿಂಗ್ಗೆ ಕೊಟ್ಟಾಗ ಅರಮನೆ ಒಳಗಡೆ ಮೊಳೆ ಹೊಡೆದು ಹಾಳು ಮಾಡಿದ್ದರು. ಆಗ ವೈಸ್ ಚಾನ್ಸಲರ್ ಆಗಿದ್ದ ಶಶಿಧರ್ ಅವರಿಗೆ ಇದನ್ನು ಶೂಟಿಂಗ್ಗೆ ಕೊಡಬೇಡಿ ಎಂದು ಪತ್ರ ಬರೆದಿದ್ದೆ. ಆಗಿನಿಂದ ಒಳಗಡೆ ಶೂಟಿಂಗ್ಗೆ ಅನಿಮತಿ ನೀಡಲಾಗುತ್ತಿಲ್ಲ. ಈಗ ಜಯಲಕ್ಷ್ಮಿ ವಿಲಾಸ ಹೊರಗಡೆ ಶೂಟಿಂಗ್ಗೆ ಅನುಮತಿ ನೀಡಿದ್ದು, ಚಿತ್ರೀಕರಣ ಮಾಡುವವರು ಎಲ್ಲವನ್ನೂ ಹಾಳು ಮಾಡಿದ್ದಾರೆ. ಅರಮನೆ ಮುಂಭಾಗ ಕೆಮ್ಮಣ್ಣು ತಂದು ಸುರಿದು, ಜೊತೆಗೆ ಪಕ್ಕದಲ್ಲಿ ಕುಸ್ತಿ ಅಖಾಡ ಮಾಡಿದ್ದಾರೆ. ನಮಗೆ ಗೊತ್ತಾಗಿದ್ದು ಬೆಳಗ್ಗೆ 07 ಗಂಟೆಗೆ, ಅದಾದ ತಕ್ಷಣ ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳು ಅಲ್ಲಿ ಬಂದು ತಿಂಡಿ, ಊಟ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ. ಜೊತೆಗೆ ಸಿನಿಮಾದವರಿಗೆ ಕೊಡುವಾಗ 19 ನಿಬಂಧನೆಗಳನ್ನು ಹಾಕಲಾಗಿತ್ತು. ಅದರಲ್ಲಿ 10ಕ್ಕಿಂತ ಹೆಚ್ಚು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರೊ.ರಂಗರಾಜು ಆರೋಪಿಸಿದ್ದಾರೆ.
ಈ ಅರಮನೆಯ ಆವರಣದಲ್ಲಿ 25 ಗಂಧದ ಮರಗಳು ಇವೆ, ಆ ಗಂಧದ ಮರದ ಕೊಂಬೆಗಳನ್ನು ಕತ್ತರಿಸಿದ್ದಾರೆ, ಸಿನಿಮಾದವರು ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ನಮಗೆ ಸಿನಿಮಾ ಮುಖ್ಯ ಅಲ್ಲ, ನಮಗೆ ಪಾರಂಪರಿಕ ಕಟ್ಟಡಗಳು ಮುಖ್ಯ. ಶೂಟಿಂಗ್ ಹೊರಗಡೆ ಮಾಡಿಕೊಳ್ಳಿ ಎಂದರೆ ಅದಕ್ಕೆಲ್ಲ ಸುಣ್ಣಬಣ್ಣ ಹೊಡೆದು, ಕಾರಿಡಾರ್ ಒಳಗೆ ಶೂಟಿಂಗ್ ಮಾಡುತ್ತಿದ್ದಾರೆ, ಮುಂದೆಯೆಲ್ಲ ಮಣ್ಣು ತುಂಬಿ ಕುಸ್ತಿ ಅಖಾಡ ಮಾಡಿಕೊಂಡಿದ್ದಾರೆ. ಜಯಲಕ್ಷ್ಮಿ ವಿಲಾಸ ಮೈಸೂರು ವಿಶ್ವವಿದ್ಯಾನಿಲಯದ ಆಸ್ತಿ. ಇನ್ಮುಂದೆ ಇಲ್ಲಿ ಶೂಟಿಂಗ್ಗೆ ಅನುಮತಿ ನೀಡದಂತೆ ವೈಸ್ ಚಾನ್ಸಲರ್ ಅವರ ಹತ್ತಿರ ನಾನು ಮಾತನಾಡಿದ್ದೇನೆ. ಇಲ್ಲಿಯ ಯಾವೊಂದು ಸ್ಥಳಗಳಲ್ಲೂ ಚಿತ್ರೀಕರಣಕ್ಕೆ ಜಾಗವನ್ನು ಕೊಡಬಾರದು ಎಂದಿದ್ದಾರೆ.
ನಾವು ಈಗಾಗಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದೇವೆ. ಅವರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಂಪ್ಲೇಂಟ್ ಅನ್ನು ಸಹ ಬರೆದುಕೊಟ್ಟಿದ್ದೇವೆ, ಅದರ ಪ್ರಕಾರ ಕ್ರಮ ಕೈಗೊಳ್ಳಬೇಕು. ಗಂಧದ ಮರ ಕಡಿದಿರುವುದು ಜಾಮೀನು ರಹಿತ ಅಪರಾಧ. ಮೊದಲು ಇದರ ನಿರ್ದೇಶಕ, ನಿರ್ಮಾಪಕ, ಹಾಗೂ ಲೋಕಲ್ ಮ್ಯಾನೇಜರ್ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಪ್ರೊ. ರಂಗರಾಜು ಆಗ್ರಹಿಸಿದರು.
ಇದನ್ನೂ ಓದಿ: ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಹಸೆಮಣೆ ಏರಿದ ವಾಸುಕಿ ವೈಭವ್