ಮೈಸೂರು: ಶ್ರೀರಾಮಚಂದ್ರ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಸೋಮವಾರ ಇಲ್ಲಿನ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಅಕ್ಟೋಬರ್ 13ರಂದು ಮೈಸೂರಿನ ಪುರಭವನದಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಕೆ.ಎಸ್.ಭಗವಾನ್ ಅವರು, ಹಿಂದೂ ಧರ್ಮದ ಪುರಾಣ ಪುರುಷ ಶ್ರೀರಾಮಚಂದ್ರ ಮತ್ತು ನಮ್ಮ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಕೃತಿಯಾದ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಇದೆ ಎಂದು ಉಲ್ಲೇಖಿಸುತ್ತ ಭಗವಾನ್ ಮಾತನಾಡಿದ್ದಾರೆ. ನಮ್ಮ ಸಮುದಾಯದ ಬಗ್ಗೆ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಬಂಧಪಡದ ಒಕ್ಕಲಿಗ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಹೇಳಿರುವುದು ಸಮಂಜಸವಲ್ಲ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಒಕ್ಕಲಿಗರ ಸಂಘದ ದೂರಿನಲ್ಲಿ ತಿಳಿಸಲಾಗಿದೆ.
'ಹಿಂದೂ ಧರ್ಮದ ಪುರಾಣ ಪುರುಷ ಶ್ರೀರಾಮಚಂದ್ರ ಮತ್ತು ನಮ್ಮ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಎಸ್.ಭಗವಾನ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಅಲ್ಲದೆ, ಭಗವಾನ್ ವಿರುದ್ಧ ಜಿಲ್ಲಾಡಳಿತ ಹಾಗೂ ಸರ್ಕಾರ ಸುಮೋಟೋ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ' ಎಂದು ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ ತಿಳಿಸಿದ್ದಾರೆ.