ಮೈಸೂರು: ರವಿ ಪೂಜಾರಿ ಬಂಧನಕ್ಕೆ ಸಂಬಂಧಿಸಿದಂತೆ ಇದ್ದ ಕಾನೂನು ತೊಡಕುಗಳೆಲ್ಲ ಬಗೆಹರಿದಿವೆ. ದಕ್ಷಿಣ ಆಫ್ರಿಕಾದ ಕೋರ್ಟ್ ಎಲ್ಲದಕ್ಕೂ ಸಮ್ಮತಿ ನೀಡಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕಾನೂನಿನ ಕೆಲ ನಿಯಮಗಳು ಬಾಕಿ ಇವೆ. ಅವು ಮುಗಿದ ಕೂಡಲೇ ಬೆಂಗಳೂರಿಗೆ ಕರೆ ತರುವ ಕೆಲಸ ಮಾಡುತ್ತೇವೆ. ಅಂತಾರಾಷ್ಟ್ರೀಯ ಸಚಿವಾಲಯ ಕೂಡ ನಿರಂತರ ಸಂಪರ್ಕದಲ್ಲಿದೆ. ನಮ್ಮ ಅಧಿಕಾರಿಗಳು ಅಲ್ಲಿಯೇ ಇದ್ದಾರೆ. ಶೀಘ್ರದಲ್ಲೇ ಅವರನ್ನ ಕರೆತರುವ ಕೆಲಸ ಮಾಡುತ್ತೇವೆ ಎಂದರು.
ಇನ್ನು ಪಾಕಿಸ್ತಾನ ಪರ ಅಮೂಲ್ಯ ಲಿಯೋನಾ ದೇಶದ್ರೋಹದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ಷಡ್ಯಂತ್ರದ ಒಂದು ಭಾಗ. ಅಮೂಲ್ಯಳ ತೀವ್ರ ವಿಚಾರಣೆ ನಡೆಯುತ್ತಿದೆ. ಅವಳ ಹಿಂದೆ ಯಾರಿದ್ದಾರೆ? ಯಾವ ಸಂಘಟನೆ ಇದೆ ಎಂದು ವಿಚಾರಣೆ ನಡೆಯುತ್ತಿದೆ. ಇದು ಜೆಎನ್‌ಯು ಯಿಂದ ಹಿಡಿದು ಅಫ್ಜಲ್ ಗುರು ಗಲ್ಲಿಗೇರಿಸೋವರೆಗು ನಡೆದಿದೆ ಎಂದರು. ಅಫ್ಜಲ್ ಗುರು ಗಲ್ಲಿಗೇರಿಸೋ ವಿಚಾರದಲ್ಲಿ ಕನ್ಹಯ್ಯ ಕುಮಾರ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಇದನ್ನ ಭೇದಿಸುವ ಕೆಲಸ ಸದ್ಯ ನಡೆಯುತ್ತಿದೆ. ಡಿಜಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಸಿಐಡಿ ಸೇರಿ ಎಲ್ಲಾ ವಿಂಗ್ಗಳ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆಲ ಸಂಘಟನೆಗಳಿಗೆ ಎನ್‌ಜಿಓ ಹಣ ವರ್ಗಾವಣೆ ಆಗುವ ಕುರಿತುಂತೆ ಮಾತನಾಡಿದ ಸಚಿವರು, ಕೆಲ ಎನ್‌ಜಿಓಗಳನ್ನ ಬ್ಲ್ಯಾಕ್ ಲಿಸ್ಟ್ ಮಾಡಲಾಗಿದೆ. ಅಂತವರ ಮೇಲೆ ಇಡಿ ನಿಗಾ ಕೂಡ ಇಟ್ಟಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ಕೊಡ್ತಿಲ್ಲ. ಬದಲಿಗೆ ಇವರು ಪ್ರಚಾರದ ಗೀಳು ಅಂದರೆ ಶಾಂತಿ ಭಂಗ ಮಾಡೋದು. ಪ್ರಜಾಪ್ರಭುತ್ವದ ಮೂಲಕ ಯಾವುದನ್ನು ಎದುರಿಸಲು ಆಗೋದಿಲ್ಲವೋ ಅಂತವರು ಈ ಮಾರ್ಗ ಹಿಡಿಯುತ್ತಿದ್ದಾರೆ ಎಂದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಲವು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಈ ರೀತಿಯ ಶಕ್ತಿಗಳು ಹುಟ್ಟಿಕೊಂಡಿವೆ. ಅದನ್ನ ಸಮರ್ಥವಾಗಿ ನಾವು ಎದುರಿಸುತ್ತೇವೆ ಎಂದು ಸಚಿವ ಬೊಮ್ಮಾಯಿ ಎಚ್ಚರಿಕೆ ರವಾನಿಸಿದರು.