ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಇಂಡಿಯನ್ ಏರ್ಫೋರ್ಸ್ ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ನಗರದ ಬನ್ನಿಮಂಟಪ ಮೈದಾನದಲ್ಲಿ ಅಕ್ಟೋಬರ್ 2 ರಂದು ಬೆಳಿಗ್ಗೆ 11: 30 ಕ್ಕೆ ಏರ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ ಏರ್ ಶೋ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಭಾರತೀಯ ವಾಯು ಪಡೆಯಿಂದ ನಡೆಯುವ ಈ ಕಾರ್ಯಕ್ರಮ ಸುಮಾರು 49 ನಿಮಿಷಗಳ ಕಾಲ ನಡೆಯುತ್ತದೆ. ಪೆಟಲ್ ರಾಪಿಂಗ್ , ಆಪರೇಷನ್ ಹಾಗೂ ಸ್ಕೈ ಡೈವಿಂಗ್ ಸಾಹಸಗಳನ್ನು ಮಾಡಲಿದ್ದು, ಇದಕ್ಕೆ ಈಗಾಗಲೇ ರಿಹರ್ಸಲ್ ಕೂಡ ಮಾಡಿಕೊಳ್ಳಲಾಗುತ್ತಿದೆ. ಇನ್ನು ಅಕ್ಟೋಬರ್ 1 ರಿಂದ ದಸರಾ ಗೋಲ್ಡ್ ಕಾರ್ಡ್ ವಿತರಿಸಲಾಗುವುದು. ಒಂದು ಗೋಲ್ಡ್ ಕಾರ್ಡ್ ಬೆಲೆ 4 ಸಾವಿರ ರೂ. ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಎಲ್ಲಾ ಕಾರ್ಯಕ್ರಮಗಳಲ್ಲೂ ಗೋಲ್ಡ್ ಕಾರ್ಡ್ನೊಂದಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗುವುದು. ಇದಲ್ಲದೆ 1 ಸಾವಿರ, 500 ರೂ. ಟಿಕೆಟ್ ಜಂಬೂಸವಾರಿಗೆ ಹಾಗೂ ಪಂಜಿನ ಕವಾಯತಿನ ಸ್ಥಳ ಪ್ರವೇಶಕ್ಕೆ ಟಿಕೆಟ್ ಬೆಲೆ 250 ರೂಪಾಯಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ರು. ಈ ಬಾರಿ ಅರಮನೆಯ ಮುಂಭಾಗದಲ್ಲಿ ಜಂಬೂಸವಾರಿ ವೀಕ್ಷಣೆ ಮಾಡಲು 26 ಸಾವಿರ ಆಸನ ವ್ಯವಸ್ಥೆಯನ್ನು ಬನ್ನಿಮಂಟಪದ ಪಂಜಿನ ಕವಾಯತನ್ನು ವೀಕ್ಷಣೆ ಮಾಡಲು 32 ಸಾವಿರ ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಮಾಡಲು ಸಿದ್ಧತೆ ಆರಂಭಿಸಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.