ಮೈಸೂರು: ಟಗರು ಸಿನಿಮಾದಲ್ಲಿ ಸರೋಜ ಪಾತ್ರದ ಮೂಲಕ ಕನ್ನಡಿಗರನ್ನು ರಂಜಿಸಿದ್ದ ನಟಿ ಈಗ ತಮ್ಮ ಮಾದರಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ನಟಿ ರಿಷಿಕ ರಾಜ್ ಅವರು ಸಾಂಸ್ಕೃತಿಕ ನಗರಿಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ 14 ಇಂಚು ಉದ್ದದ ತಲೆ ಕೂದಲನ್ನ ದಾನ ಮಾಡಿದ್ದಾರೆ. ಈ ಮೂಲಕ ರೋಗಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
ನಿವೇದಿತಾ ನಗರದ ಉದ್ಯಾನವನದಲ್ಲಿರುವ ಹೇರ್ ಮತ್ತು ಬ್ಯೂಟಿ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಹೇರ್ ಡೊನೇಟ್ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಂದಿ ತಮ್ಮ ಕೂದಲನ್ನು ದಾನ ಮಾಡಿದರು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ರಿಶಿಕ ರಾಜ್ ಅವರು ತಮ್ಮ ತಲೆ ಕೂದಲಿನಲ್ಲಿ 14 ಇಂಚನ್ನು ದಾನ ಮಾಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನನಗೆ ಇವತ್ತು ತುಂಬಾ ಖುಷಿಯಾಗಿದೆ. ಪ್ರಪಂಚದಲ್ಲಿ ಇಂದು ಎಷ್ಟೋ ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ವಿದ್ಯಾದಾನ, ಕನ್ಯಾದಾನ ರೀತಿ ಕೂದಲು ದಾನ ಸಹ ಒಂದು. ನನ್ನ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ಕ್ಯಾನ್ಸರ್ ಇರುವವರನ್ನು ನೋಡಿದ್ದೇನೆ. ಅವರಿಗೆ ಕಿಮೋಥೆರಪಿ ಮಾಡಿದಾಗ ಕೂದಲು ಉದುರುತ್ತದೆ. ಆಗ ಅದನ್ನು ನೋಡಿದಾಗ ತುಂಬಾ ನೋವಾಗುತ್ತದೆ. ಆ ಕಾರಣಕ್ಕಾಗಿ ದೇವರು ನಮಗೆ ಕೂದಲು ಕೊಟ್ಟಿದ್ದಾನೆ. ಹಾಗಾಗಿ, ದಾನ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ನನಗೆ ಪೂರ್ತಿ ಕೂದಲು ಕೊಡಬೇಕು ಅಂತ ಆಸೆ. ಆದರೆ, ಶೂಟಿಂಗ್ ಇರುವ ಕಾರಣ ಪೂರ್ತಿ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ, 14 ಇಂಚು ಉದ್ದದ ಕುತ್ತಿವರೆಗಿನ ಕೂದಲನ್ನು ಕೊಟ್ಟಿದ್ದೇನೆ. ಎಲ್ಲಾ ಹೆಣ್ಣುಮಕ್ಕಳಿಗೆ ಕೂದಲು ಎಂದರೆ ತುಂಬಾ ಪ್ರೀತಿ. ಆದರೂ ಸಹ ಇಲ್ಲಿ ಅನೇಕೆ ಮಹಿಳೆಯರು ಕೂದಲನ್ನು ದಾನ ಮಾಡಲು ಬಂದಿದ್ದಾರೆ. ಅವರೆಲ್ಲಾ ಇತರರಿಗೆ ಸ್ಫೂರ್ತಿ ಆಗಿದ್ದಾರೆ ಎಂದು ಹೇಳಿದರು.
ಪುನೀತ್ ರಾಜ್‍ಕುಮಾರ್ ಸರ್ ಒಳ್ಳೆಯ ಸ್ನೇಹಿತರು. ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದು ನಮ್ಮನ್ನೆಲ್ಲ ನೋಡುತ್ತಿದ್ದಾರೆ. ಅವರ ಆಶೀರ್ವಾದ, ಅಪ್ಪಾಜಿಯವರ ಆಶೀರ್ವಾದ, ಅವರ ಮನೆಯವರ ಹಾರೈಕೆ ನಮ್ಮ ಮೇಲೆ ಇರುತ್ತದೆ ಎಂದು ನಟಿ ರಿಶಿಕ ಭಾವುಕರಾದರು.
ಓದಿ: ಸಿಎಂ ಕಾರ್ಯಕ್ರಮದಲ್ಲಿ ಗೊಂದಲ: ಭದ್ರತಾ ವೈಫಲ್ಯವೆಂದ ರಾಮನಗರ ಡಿಸಿ