ಮೈಸೂರು: ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ವಾಟ್ಸ್ಆ್ಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ, ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಪರೋಕ್ಷವಾಗಿ ಬಹುಭಾಷಾ ನಟ ಪ್ರಕಾಶ್ ರೈ ವಾಗ್ದಾಳಿ ಮಾಡಿದರು.
ಜೈ ಭೀಮ್ ಕೋರೆಗಾಂವ್ ವಿಜಯೋತ್ಸವ ಸಮಿತಿ ವತಿಯಿಂದ ಅಶೋಕಪುರಂನ ಜಯನಗರ ರೈಲ್ವೆ ಗೇಟ್ ಹತ್ತಿರ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ 205ನೇ ವರ್ಷದ ಸಂಭ್ರಮಾಚರಣೆ ಸಮಾರಂಭ ಹಾಗೂ ದಲಿತರ ಸ್ವಾಭಿಮಾನಿ ಜಾಗೃತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಇಲ್ಲದವರಿಗೆ ಭವಿಷ್ಯ ಇರಲ್ಲ. ಪ್ರಪಂಚದ ಬಲಪಂಥೀಯರಿಗೆ ಇತಿಹಾಸವೇ ಇಲ್ಲ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತು ಸತ್ಯ. ಸುಳ್ಳು ಎಂಬುದು ಒಂದು ರೀತಿ ಅಯಸ್ಕಾಂತವಿದ್ದಂತೆ, ಆದ್ದರಿಂದಲೇ ಜನ ಬೇಗ ಸುಳ್ಳನ್ನು ನಂಬುತ್ತಾರೆ. ಆದರೆ, ಸತ್ಯ ಬೆಳಕಿಗೆ ಬರಲಿದೆ ಎಂದರು.
ಇತಿಹಾಸವೇ ಇಲ್ಲದವರಿಂದ ಹಾಗೂ ಇತಿಹಾಸದ ಮಹತ್ವವೇ ಗೊತ್ತಿಲ್ಲದವರಿಂದ ಇಂದು ಇತಿಹಾಸ ತಿರುಚುವ ಕೆಲಸವಾಗುತ್ತದೆ. ಇದು ಹೆಚ್ಚು ದಿನ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ದೇಶಕ್ಕೆ ಇಂತಹ ಸಂಘಟನೆಗಳು ಅಪಾಯಕಾರಿ. ಯಾರು ಸಂಘಟನೆಯೊಂದನ್ನು ನಿಷೇಧ ಮಾಡಿದ್ದರೂ ಅಂತಹ ಪಟೇಲರಿಗೆ ಮೂರು ಸಾವಿರ ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಸೆಲ್ಫಿ ತೆಗೆದುಕೊಳ್ಳಲು ಆಗುತ್ತದೆ. ಇವರ ಕಾಗಕ್ಕ ಗುಬಕ್ಕ ಕಥೆಗಳನ್ನು ಜನರು ನಂಬುವುದಿಲ್ಲ. ಗೋ ಮೂತ್ರ ಕುಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಕುಡಿದು ತೋರಿಸಲಿ. ಜೈ ಭೀಮ್ ಅಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ: ದೇಶದ ಹದಗೆಟ್ಟ ವ್ಯವಸ್ಥೆ ಸರಿಪಡಿಸಲು ಯಾರಿಗೂ ಸಾಧ್ಯ ಇಲ್ಲ: ನಟ ಪ್ರಕಾಶ್ ರಾಜ್
ನಾನು ಕಳೆದುಕೊಳ್ಳುವಂತಹ ಶ್ರೀಮಂತಿಕೆಯನ್ನು ಸಂಪಾದಿಸಿಲ್ಲ. ನನ್ನ ಶ್ರೀಮಂತಿಕೆಯೇ ಅಂಬೇಡ್ಕರ್, ಕುವೆಂಪು, ಲಂಕೇಶ್, ತೇಜಸ್ವಿ. ಶ್ರೀಮಂತನಿಗೂ ಬಡವನಿಗೂ ಇರುವುದು ಒಂದೇ ಕೆಂಪು ರಕ್ತ. ಆದರೆ, ರಕ್ತದಿಂದ ಪಾಠ ಕಲಿಯದ ಇವರು ದೇಶಕ್ಕಾಗಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಾರಂಭ ಆಯೋಜಿಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಅವರವನ್ನು ಬಂಧಿಸಲಾಯಿತು. ಸಮಾಜದ ವ್ಯವಸ್ಥೆಯನ್ನು ಪ್ರಶ್ನಿಸುವುದು ತಪ್ಪೇ?, ಇವರು ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರಕಾಶ್ ರೈ 'ಅಪ್ಪು ಆ್ಯಂಬುಲೆನ್ಸ್ ಸೇವೆ'ಗೆ ಯಶ್ ಸಾಥ್