ಮೈಸೂರು: ದಸರಾ ಆಚರಣೆಗಾಗಿ ಆ್ಯಕ್ಷನ್ ಕಮಿಟಿ ವರದಿ ಬೇಕು. 24 ಗಂಟೆ ಒಳಗೆ ವರದಿ ಸಲ್ಲಿಸಲು ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಕೋವಿಡ್ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾಗಾಗಿ ಆರೋಗ್ಯ ಇಲಾಖೆಯಿಂದ ಆ್ಯಕ್ಷನ್ ಪ್ಲಾನ್ ಆಗಬೇಕು. ಅದಕ್ಕಾಗಿ ಟೆಕ್ನಿಕಲ್ ಕಮಿಟಿ ವರದಿ ಬರಲಿದೆ. ಅದರ ಜೊತೆಗೆ ಜಿಲ್ಲಾಡಳಿತ ಸಭೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸಲಿದೆ. ಈ ಬಗ್ಗೆ ನಾನು ಸಹ ಸಿಎಂ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದರು.
ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮ, ದೀಪದ ಅಲಂಕಾರ, ಅರಮನೆ ಕಾರ್ಯಕ್ರಮಗಳು ಬೇಕೋ ಬೇಡವೋ ಎಂಬುದರ ಚರ್ಚೆ ಆಗಿದೆ. ಆದರೂ ಜನರು ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ಸುಮ್ಮನಿರದೇ ಸರ್ಕಾರದೊಂದಿಗೆ ಸಹಕಾರ ಕೊಡಬೇಕು ಎಂದರು.
ಸುರಕ್ಷತೆಯಿಂದ ಸರಳ ದಸರಾ ಆಚರಿಸಲು ಅವಕಾಶ ಕೊಡಿ. 2000 ಮಂದಿಗೆ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕೋ ಇಲ್ಲವೋ ಎನ್ನುವುದನ್ನು ಟೆಕ್ನಿಕಲ್ ಕಮಿಟಿ ವರದಿ ಬಂದ ನಂತರ ನಿರ್ಧಾರ ಮಾಡಲಾಗುವುದು. ನಮ್ಮ ಆರೋಗ್ಯ ಇಲಾಖೆ ನಿರ್ದೇಶಕರು, ಸ್ಥಳಿಯ ಅಧಿಕಾರಿಗಳನ್ನೊಳಗೊಂಡ ಕಮಿಟಿಯೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಇನ್ನೂ 24 ಗಂಟೆಯೊಳಗೆ ಕಮಿಟಿ ವರದಿ ನೀಡಲಿದೆ. ಆ ನಂತರ ದಸರಾ ಬಗ್ಗೆ ಎಸ್‌ಓಪಿ ಸಿದ್ದಪಡಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.