ಮೈಸೂರು: ಕೃಷಿ ಹೊಂಡ ನಿರ್ಮಿಸಿದ ಕಾಮಗಾರಿಗೆ ಎನ್ಎಂಆರ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ಹಾಗೂ ಪಿಡಿಒ ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೆ.ಆರ್.ನಗರ ತಾಲೂಕಿನ ಇಂಜಿನಿಯರ್ ಅಂಜನಾ ಹಾಗೂ ಅಂಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರಾಮಸ್ವಾಮಿ ಎಸಿಬಿ ಬಲೆಗೆ ಬಿದ್ದವರು.
![ACB ride in mysore](https://etvbharatimages.akamaized.net/etvbharat/prod-images/kn-mys-05-acb-ride-vis-ka10003_01092021215806_0109f_1630513686_903.jpg)
ಕೆ.ಆರ್.ನಗರ ತಾಲೂಕಿನ ಶಾಬಾಳು ನಿವಾಸಿಯೊಬ್ಬರು,ಗ್ರಾಮದಲ್ಲಿನ ಅವರ ತಾಯಿಯ ಹೆಸರಿನಲ್ಲಿನ 25 ಗುಂಟೆ ಜಮೀನಿಗೆ ನೀರಾವರಿ ಸೌಲಭ್ಯಕ್ಕಾಗಿ ಕೃಷಿ ಹೊಂಡ ನಿರ್ಮಿಸಲು ಸರ್ಕಾರದ ವತಿಯಿಂದ ನೀಡಲಾಗುವ ಅನುದಾನವನ್ನು ಪಡೆಯಲು ಆಗಸ್ಟ್, 31ರಂದು ಅಂಕನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ, ನಂತರ ಕೃಷಿ ಹೊಂಡ ನಿರ್ಮಿಸಿದ್ದಾರೆ.
ಈ ಕಾಮಗಾರಿಯನ್ನು ಪಂಚಾಯಿತಿ ಇಂಜಿನಿಯರ್ಯೋರ್ವರು ಪರಿಶೀಲಿಸಿದ್ದು, ಈ ವೆಚ್ಚದ 86 ಸಾವಿರ ರೂ. ಅನುದಾನದ ಬಿಲ್ ಅನ್ನು ಪಡೆಯಲು ಎನ್ಎಂಆರ್ ಅಗತ್ಯವಿದ್ದದರಿಂದ ಬಿಲ್ ಪಡೆಯಲು ಇಂಜನಿಯರ್ ಅಂಜನಾ ಹಾಗೂ ಪಿಡಿಒ ರಾಮಸ್ವಾಮಿ ಅವರಿಗೆ ಆ.27ರಂದು ಸಂಪರ್ಕಿಸಲಾಗಿತ್ತು. ಎನ್ಎಂಆರ್ ಒದಗಿಸಲು ಹಾಗೂ ಬಿಲ್ನ ಮಂಜೂರಿಗೆ ತಲಾ 5ಸಾವಿರ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕೊನೆಯದಾಗಿ 4 ಸಾವಿರ ರೂಪಾಯಿ ಪಡೆದುಕೊಳ್ಳಲು ಒಪ್ಪಿಕೊಂಡಿದ್ದಾರೆ.
ಹಣ ನೀಡುತ್ತಿದ್ದ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೆ.ಆರ್.ನಗರ ತಾಲ್ಲೂಕಿನ ತಾಂತ್ರಿಕ ಸಹಾಯಕ ಇಂಜಿನಿಯರ್ ಅಂಜನಾ, ಹಾಗೂ ಅಂಕನಹಳ್ಳಿ ಗ್ರಾಪಂ ಪಿಡಿಒರನ್ನ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.