ಮೈಸೂರು: ಹಾಲಿನ ಉತ್ಪನ್ನಗಳ ಸರಬರಾಜು ನಿಲ್ಲಿಸಲು ಆದೇಶಿಸಿದ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರ್ಕಾರದಿಂದ ಬಡವರಿಗೆ ಎಂದು ಉಚಿತವಾಗಿ ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕ್ಗಳನ್ನು ನೀಡಲಾಗುತ್ತಿದ್ದು, ಆದರೆ ಮಂಡಿ ಮಾರುಕಟ್ಟೆ ಬಳಿ ಹಾಲಿನ ಬೂತ್ನಲ್ಲಿ ಆರೋಪಿತ ದಿನೇಶ್ ಹಾಗೂ ಬಾಲಕೃಷ್ಣ ಎಂಬುವವರು ಗ್ರಾಹಕರಿಂದ ಹಣ ಪಡೆದು ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಪಡೆದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ 8 ನಂದಿನಿ ಪ್ಯಾಕೆಟ್ನ್ನು ಜಪ್ತಿ ಮಾಡಿದ್ದರು.
ಇದು ಮೈಮುಲ್ ಘನತೆಗೆ ಧಕ್ಕೆ ಬಂದಿದೆ ಎಂದು ಅಸಮಾಧಾನಗೊಂಡ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ವಿತಕರಿಗೆ ಹಾಲು ಮತ್ತಿತರ ಉತ್ಪನ್ನಗಳ ಸರಬರಾಜು ನಿಲ್ಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಿನೇಶ್ ಮೈಮುಲ್ ಕಚೇರಿಗೆ ನುಗ್ಗಿ ಅಶೋಕ್ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅನುಚಿತವಾಗಿ ವರ್ತನೆ ಮಾಡಿ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಈ ಹಿನ್ನೆಲೆಯಲ್ಲಿ ಅಶೋಕ್ ಅವರು ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.