ಮೈಸೂರು: ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲಸಕ್ಕೆ ಬಂದಾಗ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ, ಚಿತ್ರಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿ ದೂರು ನೀಡಿದ್ದಾರೆ. ಒಡನಾಡಿ ಸೇವಾಸಂಸ್ಥೆಯ ಆಶ್ರಯದಲ್ಲಿರುವ ಯುವತಿಯು ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆಯೊಡ್ಡಿ ಬಳಿಕ ಬಲವಂತವಾಗಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಒಂದು ದಿನದಲ್ಲೇ ತವರು ಮನೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ತವರು ಮನೆಗೆ ಬಂದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ನಂತರ ವಿಜಯನಗರ ಮನೆಯಿಂದ ಹೊರಹಾಕಿದ್ದರು. ಮತ್ತೆ ಕೆಲ ದಿನಗಳ ನಂತರ ಹೋಟೆಲ್‌ಗೆ ಕರೆಯಿಸಿಕೊಂಡು ಅತ್ಯಾಚಾರ ನಡೆಸಿದ್ದಾರೆ. ಬಳಿಕ ಕುವೆಂಪುನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ 2020 ಮಾರ್ಚ್ ನಿಂದ ಒಟ್ಟಿಗೆ ಜೀವನ ನಡೆಸಲು ಪ್ರಾರಂಭಿಸಿದಾಗ ವರದಕ್ಷಿಣೆ ನೀಡುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಸ್ಯಾಂಟ್ರೋ ರವಿಗೆ ಲೈಂಗಿಕ ಸೋಂಕು ಇತ್ತು. ಆದರೆ, ಆ ವಿಚಾರವನ್ನು ಮರೆಮಾಚಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಬಲವಂತವಾಗಿ ನನಗೆ ಗರ್ಭಪಾತ ಮಾಡಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ಸಂಘರ್ಷ ಸಮಿತಿ ಕ್ರಮಕ್ಕೆ ಆಗ್ರಹ : ದಲಿತ ಯುವತಿಯ ಮೇಲೆ ದೌರ್ಜನ್ಯ ಎಸಗಿರುವ ಸ್ಯಾಂಟ್ರೋ ರವಿ ವಿರುದ್ದ ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ರವಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕ ಇದ್ದು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸರ್ಕಾರವನ್ನೇ ಹೊಣೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾಂಟ್ರೋ ರವಿ ಮೇಲೆ ಎಷ್ಟು ಕೇಸ್ ಇವೆ- ಹೆಚ್ಡಿಕೆ ಪ್ರಶ್ನೆ.. : ಬೆಂಗಳೂರಿನ ತಮ್ಮ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಸ್ಯಾಂಟ್ರೋ ರವಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮೈತ್ರಿ ಸರ್ಕಾರ ತೆಗೆಯಲು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಾಂಬೆಗೆ ಹೋದರಲ್ಲಾ ಅದು ಯಾರು?. ಇದನ್ನು ಸೀಕ್ರೆಟ್ ಆಗಿ ಇಡಲು ಯಾರಿಗೆ ಸೂಚನೆ ಕೊಟ್ಟಿರಿ?. ಬಾಂಬೆಗೆ ಇಲ್ಲಿಂದ ಕೆಲವರನ್ನು ಮೋಜು ಮಾಡಲು ಕರೆದುಕೊಂಡು ಹೋದ್ರಲ್ಲಾ, ಬಿಜೆಪಿ ಎಲ್ಲರಿಗೂ ಗೌರವ ಕೊಡೊರಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಚಾಟಿ ಬೀಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 17 ಮಂದಿ ಸಚಿವರು ಸ್ಟೇ ತೆಗೆದುಕೊಂಡಿಲ್ಲವೇ?. ಈ ರಾಜ್ಯ ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಸಾಂಟ್ರೋ ರವಿ ಜೊತೆ ಯಾವ ಮಂತ್ರಿ ಸಂಪರ್ಕದಲ್ಲಿ ಇಲ್ಲ ಹೇಳಿ?. ಈ ವ್ಯಕ್ತಿ ಮೇಲೆ ಎಷ್ಟಿದೆ ಕೇಸ್. ಸ್ಯಾಂಟ್ರೋ ರವಿಗೆ ಐದು ಹೆಸರು ಇವೆ. 1995 ರಿಂದಲೂ ಆತನ ಮೇಲೆ ಕೇಸ್ ಗಳಿವೆ. ಮೈಸೂರು, ಬೆಂಗಳೂರಿನಲ್ಲಿ ಎಷ್ಟೋ ಕೇಸ್ ಗಳಿವೆ ಎಂದು ಆರೋಪಿಸಿದರು.
ಈ ಸರ್ಕಾರದಲ್ಲಿ ಕಳೆದ ತಿಂಗಳವರೆಗೆ ಕುಮಾರಕೃಪದಲ್ಲಿ ರೂಂ ಕೊಟ್ಟವರು ಯಾರು?. ಇವರ ವ್ಯವಹಾರ ಕುಮಾರಕೃಪದಲ್ಲಿ. ಅವನು ಪೊಲೀಸ್ ಅಧಿಕಾರಿಗೆ ಹೇಳ್ತಾನೆ, ನಾಳೆ ಬಂದು ನೋಡು ಎಂದು. ರೀ ಏನು ತಿಳಿದುಕೊಂಡಿದ್ದೀರಾ.?. ಸಿಎಂ ನನಗೆ ಸಾರ್ ಅಂತಾರೆ. ನೀನು ಸಾರ್ ಅಂತಿಲ್ಲ ಎಂದು ಪೊಲೀಸ್ ಅಧಿಕಾರಿಗೆ ಹೇಳ್ತಾನೆ. ಇದು ಸರ್ಕಾರನಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಜೆಪಿಯನ್ನು ಎಲ್ಲರನ್ನೂ ಉದ್ದಾರ ಮಾಡೋರಲ್ಲವೇ ಇವರು. ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ದೂರು ಕೊಟ್ಟಿದ್ದಾಳೆ. ಹಲವು ರಾಜಕಾರಣಿಗಳಿಗೆ ಒತ್ತಾಯಪೂರ್ವಕವಾಗಿ ರವಿ ಕಳಿಸಿದ್ದನೆಂದು ಹೆಚ್ಡಿಕೆ ಆರೋಪಿಸಿದರು.
ಇದನ್ನೂ ಓದಿ : ಕೀಳು ಸಂಸ್ಕೃತಿ ಕಾಂಗ್ರೆಸ್ ರಕ್ತದಲ್ಲೇ ಇದೆ: ಸಿದ್ದರಾಮಯ್ಯ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ