ಮೈಸೂರು: ಒಂದು ದೇಶ ಒಂದು ತೆರಿಗೆ ಹಾಗೆ ದೇಶದಲ್ಲಿ ಎಲ್ಲಾ ವಾಹನಗಳಿಗೂ ಒಂದೇ ಪರವಾನಗಿ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಗೂ ಮುನ್ನಾ ಮಾಧ್ಯಮಗಳ ಜೊತೆ ಮಾತನಾಡಿದ ಸಿ ಟಿ ರವಿ, ದಸರಾಗೆ 1 ತಿಂಗಳು ಬಾಕಿ ಇರುವಾಗ ಪ್ರವಾಸಿಗರನ್ನು ಆಕರ್ಷಣೆ ಮಾಡಲು ಸಾಧ್ಯವಿಲ್ಲ. ಕನಿಷ್ಟ 6 ತಿಂಗಳ ಮುಂಚೆಯೇ ಪ್ಲ್ಯಾನ್ ಮಾಡಿದರೆ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಬಹುದು. ವಿದೇಶಿಗರು 4 ತಿಂಗಳ ಮುಂಚೆ ವೀಸಾ ಮಾಡಿಸಿಕೊಳ್ಳಬೇಕು. ಪಕ್ಕದ ರಾಜ್ಯದವರನ್ನು ಆಕರ್ಷಿಸಲು 2 ತಿಂಗಳ ಮುಂಚೆ ಪ್ರಚಾರ ಆರಂಭಿಸಬೇಕು. ಆದರೆ, ಅದು ಸಾಧ್ಯವಿಲ್ಲ. ಆದ್ದರಿಂದ ದಸರಾ ಕೇವಲ ಮೈಸೂರು ಸುತ್ತಮುತ್ತ ಜಿಲ್ಲೆಗಳಿಗೆ ಸೀಮಿತವಾಗಿದೆ ಎಂದರು.
ಸ್ಟಾರ್ ಹೋಟೆಲ್ ಟ್ಯಾಕ್ಸ್ ಶೇ.28, ಬಜೆಟ್ ಹೋಟೆಲ್ ಟ್ಯಾಕ್ಸ್ ಶೇ.18ರಷ್ಟಿದೆ. ಇದನ್ನು ಕಡಿಮೆ ಮಾಡಬೇಕೆಂದು. ರೆಸ್ಯುಲೇಷನ್ ಪಾಸ್ ಮಾಡಿದ್ದು, ಇದಕ್ಕೆ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಅಂತಾರಾಜ್ಯ ಹೆದ್ದಾರಿ ಟ್ಯಾಕ್ಸ್ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ನೀತಿ ಆಯೋಗದ ಜೊತೆ ಚರ್ಚಿಸಿ ಜಿಎಸ್ಟಿ ರೀತಿ ಎಲ್ಲಾ ರಾಜ್ಯದಲ್ಲೂ ಒಂದೇ ರೀತಿ ಹೆದ್ದಾರಿ ತೆರಿಗೆ ವಿಧಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ದಸರಾ ಉದ್ದೇಶದಿಂದ ಮಂಡ್ಯ, ಮಡಿಕೇರಿ, ಮೈಸೂರು ಹಾಗೂ ಬೇರೆ ರಾಜ್ಯಗಳಿಗೆ ಹೋಗಲು ವಾಹನ ಶುಲ್ಕದಲ್ಲಿ ರಿಯಾಯಿತಿ ಕೊಟ್ಟಿದ್ದೇವೆ. ನಮ್ಮ ರಾಜ್ಯದಲ್ಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದು ರೀತಿಯ ಶುಲ್ಕ ವಿಧಿಸುವ ಬಗ್ಗೆ ಯೋಚಿಸಬೇಕಾಗಿದೆ ಎಂದರು.