ಮೈಸೂರು: ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ಪ್ರವಾಸಿ ಧಾರ್ಮಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ದೇವಾಲಯ ಬಂದ್ ಆಗಿರುವುದರಿಂದ, ದೇವಾಲಯಕ್ಕೆ ಮೂರು ತಿಂಗಳಲ್ಲಿ 8.36 ಕೋಟಿ ರೂ. ನಷ್ಟ ಆಗಿದೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯವೂ ಒಂದು. ಚಾಮುಂಡೇಶ್ವರಿ ದೇವಾಲಯಕ್ಕೆ ಕೋಟ್ಯಾಂತರ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ವಿಶೇಷವಾಗಿ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟ ಜನಸಾಗರದಿಂದ ತುಂಬಿ ಹೋಗಿರುತ್ತದೆ. ಆದರೆ ಈ ವರ್ಷ ಕೊರೊನಾದಿಂದ ದೇವಸ್ಥಾನ ಭಕ್ತರಿಲ್ಲದೆ ಖಾಲಿ ಖಾಲಿ ಕಾಣುತ್ತಿದೆ. ಹೀಗಾಗಿ ಪ್ರಸಕ್ತ ವರ್ಷ ಚಾಮುಂಡೇಶ್ವರಿ ದೇವಾಲಯಕ್ಕೆ ಸುಮಾರು 8.36 ಕೋಟಿ ರೂ. ನಷ್ಟವಾಗಿದೆ.
ಮೂರೇ ತಿಂಗಳಲ್ಲಿ 8.36 ಕೋಟಿ ನಷ್ಟ..
ಮಾರ್ಚ್ 24 ರಂದು ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಯಿತು, ಈ ಹಿನ್ನೆಲೆಯಲ್ಲಿ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡಲಾಯಿತು. ಫೆಬ್ರವರಿ ತಿಂಗಳಿನಲ್ಲೇ ಮೈಸೂರಿಗೆ ಪ್ರವಾಸಿಗರ ಆಗಮನ ಕ್ಷೀಣಿಸಿತು. ಕಳೆದ ವರ್ಷದ ಏಪ್ರಿಲ್ನಲ್ಲಿ ದೇವಾಲಯಕ್ಕೆ 1,44,78,219 ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಕೇವಲ 1,75,841 ರೂ. ಮಾತ್ರ ಸಂಗ್ರಹವಾಗಿದ್ದು, ಸುಮಾರು 1,42,02,375 ರೂ. ನಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ದೇವಾಲಯಕ್ಕೆ 4,29,61,172 ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಈ ವರ್ಷ ಜೂನ್ ತಿಂಗಳಲ್ಲಿ ಕೇವಲ 9,15,465 ರೂ. ಸಂಗ್ರಹವಾಗಿದೆ. ಸುಮಾರು 4,20,45,708 ರೂ. ಆದಾಯ ಕಡಿಮೆಯಾಗಿದೆ. ಮೂರು ತಿಂಗಳಲ್ಲಿ ಸುಮಾರು 8,36,15,574 ರೂ. ಆದಾಯ ಚಾಮುಂಡೇಶ್ವರಿ ದೇವಾಲಯಕ್ಕೆ ಕಡಿಮೆಯಾಗಿದೆ. ಈ 3 ತಿಂಗಳು ಸಂಗ್ರಹವಾಗಿರುವ ಆದಾಯದಲ್ಲಿ ಭಕ್ತರು ಆನ್ಲೈನ್ ಹಾಗೂ ಎಂಒ ಮೂಲಕ ಕಾಣಿಕೆ ನೀಡಿದ್ದ ಮತ್ತು ಎಫ್.ಡಿ. ಮೇಲಿನ ಬಡ್ಡಿಯಿಂದ ಸಂಗ್ರಹವಾದ ಆದಾಯವೂ ಸೇರಿದೆ.
ಜುಲೈ ತಿಂಗಳಿನಲ್ಲೇ ಆದಾಯ ತೀರಾ ಕುಸಿತ...
ಪ್ರತಿವರ್ಷ ಜುಲೈ ತಿಂಗಳಿನಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಆದಾಯ ದಾಖಲೆ ಪ್ರಮಾಣದಲ್ಲಿ ಬರುತ್ತದೆ. ಏಕೆಂದರೆ ಜೂನ್ ತಿಂಗಳ ಕೊನೆ ವಾರದಿಂದ ಆಷಾಢ ಮಾಸ ಶುರುವಾಗುತ್ತದೆ. 4 ಆಷಾಢ ಶುಕ್ರವಾರ ಹಾಗೂ ದೇವಿಯ ವರ್ಧಂತಿ ಮಹೋತ್ಸವಕ್ಕೆ ಭಕ್ತರು ದೇಶ-ವಿದೇಶದಿಂದ ತಾಯಿ ದರ್ಶನ ಪಡೆಯಲು ಬರುತ್ತಾರೆ. ಆದರೆ ಈ ವರ್ಷ ಕೊರೊನಾ ಸೋಂಕಿನಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಜುಲೈನಲ್ಲಿ ಸಂಗ್ರಹವಾಗಬೇಕಾಗಿದ್ದ ಆದಾಯವೂ ಕ್ಷೀಣಿಸಿದೆ.
ಭಕ್ತರ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಆದಾಯ ಕ್ಷೀಣ
ಮಾರ್ಚ್ ಆರಂಭದಿಂದಲೇ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕ್ಷೀಣಿಸಿದ್ದು, ಇದರಿಂದ ದೇವಾಲಯದ ಆದಾಯ ಸಂಗ್ರಹ ಈ ಬಾರಿ ಕುಸಿತವಾಗಿದೆ. ಮಾರ್ಚ್ನಿಂದ ಜೂನ್ವರೆಗೆ ಸಂಗ್ರಹವಾಗಿರುವ ಆದಾಯದಲ್ಲಿ ಭಕ್ತರು ಆನ್ಲೈನ್ ಮೂಲಕ ಸಲ್ಲಿಸಿರುವ ಕಾಣಿಕೆ ಒಳಗೊಂಡಿದೆ ಎಂದು ದೇವಾಲಯದ ಸಹಾಯಕ ಆಡಳಿತಾಧಿಕಾರಿ ಗೋವಿಂದರಾಜು ಈಟಿವಿ ಭಾರತ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಒಟ್ಟಾರೆ ಕೊರೊನಾ ಸೋಂಕಿನಿಂದ ಚಾಮುಂಡಿ ಬೆಟ್ಟಕ್ಕೆ ಕೋಟಿಗಟ್ಟಲೆ ನಷ್ಟವಾಗಿದ್ದು, ಕೊರೊನಾ ಕಡಿಮೆಯಾದಾಗ ಚಾಮುಂಡಿ ಬೆಟ್ಟಕ್ಕೆ ಆದಾಯ ಬರುತ್ತದೆಯೋ ಕಾದು ನೋಡಬೇಕಾಗಿದೆ.