ಮೈಸೂರು : ಮೂರು ದಿನದ ದೀಪಾವಳಿ ಹಬ್ಬಕ್ಕೆ ಜನರು ಈ ಬಾರಿ ಹಸಿರು ಪಟಾಕಿ ಕೊಳ್ಳಲು ಮುಗಿ ಬೀಳುತ್ತಿದ್ದಾರೆ. ವ್ಯಾಪಾರಸ್ಥರು ಮಾತ್ರ ಬೇಸರವಾಗಿದ್ದಾರೆ. ಕೇವಲ 5 ದಿನ ಮಾತ್ರ ಮಾರಾಟಕ್ಕೆ ಅವಕಾಶ ನೀಡಿರುವುದು ಬೇಸರಕ್ಕೆ ಕಾರಣವಾಗಿದೆ.
ಕೋವಿಡ್ ಬಳಿಕ ದೀಪಾವಳಿ ಹಬ್ಬದಂದು ಒಂದಿಷ್ಟು ಲಾಭ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರಿಗೆ ನಿರಾಶೆಯಾಗಿದೆ. ನಗರದ ಜೆ ಕೆ ಮೈದಾನ, ವಿದ್ಯಾರಣ್ಯಪುರಂ, ಹೆಬ್ಬಾಳದಲ್ಲಿ ಪಟಾಕಿ ಮಾರಾಟ ಬೆಳಗ್ಗೆಯಿಂದಲೇ ಆರಂಭವಾದರೂ ಮಧ್ಯಾಹ್ನದ ನಂತರ ಹೆಚ್ಚಿನ ಜನರು ಮಳಿಗೆಗೆ ಆಗಮಿಸುತ್ತಿದ್ದರು.
ಶಿವಕಾಶಿಯಲ್ಲಿ ತಯಾರಾದ ಪಟಾಕಿಗಳು ಲಭ್ಯವಿದ್ದು, ಚೀನಾ ಪಟಾಕಿಗಳ ಹಾವಳಿಗೆ ಬ್ರೇಕ್ ಹಾಕಲಾಗಿದೆ. ಪ್ರತಿ ಮಳಿಗೆಯಲ್ಲೂ ಸಿಎಸ್ಐಆರ್-ಎನ್ಇಇಆರ್ಐಯಿಂದ ಅನುಮತಿ ಪಡೆದ ಪಟಾಕಿಗಳ ಮಾರಾಟ ಮಾತ್ರ ಕಂಡು ಬಂದಿದೆ.
ಪಟಾಕಿ ಮಾರಾಟಕ್ಕೆ 5 ದಿನ ಅವಕಾಶ
ನವೆಂಬರ್ 1ರಿಂದ 5ರವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಾರಾಟಗಾರರು ಪಾಲಿಕೆ ಅಗ್ನಿಶಾಮಕ ದಳ, ಪೊಲೀಸ್ ಠಾಣೆ ಹಾಗೂ ಸೆಸ್ಕ್ನ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜಿಲ್ಲಾಡಳಿತದಿಂದ ಪರವಾನಿಗೆ ಪಡೆದವರಷ್ಟೇ ಮಾರಾಟ ಮಾಡಬೇಕು.
ಹಸಿರು ಪಟಾಕಿಗಳು ಸಾಮಾನ್ಯ ಪಟಾಕಿಗಳಿಗಿಂತಲೂ ಶೇ.30ರಷ್ಟು ಕಡಿಮೆ ಮಾಲಿನ್ಯಕಾರಕಗಳಾಗಿವೆ. ಇವು ಅಲ್ಯುಮಿನಿಯಂ, ಬೇರಿಯಂ, ಪೊಟ್ಯಾಶಿಯಂ ನೈಟ್ರೇಟ್ ರಹಿತವಾಗಿದ್ದು, ಸಿಎಸ್ಐಆರ್-ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ ಮಾನದಂಡ ಹೊಂದಿರಲಿದೆ. ಶಬ್ದದ ಪ್ರಮಾಣ 160 ಡೆಸಿಬಲ್ಸ್ನಿಂದ 110-125ಕ್ಕೆ ಇಳಿಸಲಾಗಿರುತ್ತದೆ.
ಇದನ್ನೂ ಓದಿ: ಹಣತೆ ತಯಾರಿಕೆಯಲ್ಲಿ ತೊಡಗಿದ ಶ್ರೀ ಮಾಧವ ಗೋಶಾಲೆ.. ಪರಿಸರ ರಕ್ಷಣೆ ಜತೆಗೆ ಮಹಿಳೆಯರಿಗೆ ಉದ್ಯೋಗ