ಮೈಸೂರು: ಕೆಆರ್ಎಸ್ ಡ್ಯಾಂ ಸುತ್ತಮತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದಾಗಿ ಡ್ಯಾಂಗೆ ಅಪಾಯ ಉಂಟಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಆತಂಕ ವ್ಯಕ್ತಪಡಿಸಿದರು.
ಇಂದು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಕೆಆರ್ಎಸ್ ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ವರದಿ ನೀಡಿತ್ತು. ಆದರೂ ಕೆಆರ್ಎಸ್ ಡ್ಯಾಂ ಸುತ್ತ 49 ಕಡೆಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ಡ್ಯಾಂ ಸುತ್ತ 20 ಕಿಲೋ ಮೀಟರ್ ಅಂತರದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸದಿದ್ದರೆ ಡ್ಯಾಂ ನಂಬಿಕೊಂಡು ಬದುಕುವ 6 ಜಿಲ್ಲೆ ಮತ್ತು 4 ರಾಜ್ಯಗಳಿಗೆ ಅಪಾರ ನಷ್ಟವಾಗುತ್ತದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಬುಡಮೇಲು ಆಗುತ್ತದೆ. ಹಾಗಾಗಿ ತಕ್ಷಣವೇ ಗಣಿಗಾರಿಕೆ ನಿಲ್ಲಿಸಬೇಕೆಂದು ಲಕ್ಷ್ಮಣ್ ಆಗ್ರಹಿಸಿದರು.