ಮೈಸೂರು: ವನ್ಯಜೀವಿ ಸಫಾರಿಗೆ ಪ್ರಸಿದ್ಧಿಯಾಗಿರುವ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ 2 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಅರಣ್ಯ ಇಲಾಖೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಕಾರದಿಂದ ಸ್ವಚ್ಛಗೊಳಿಸಿ ಸಂಗ್ರಹ ಮಾಡಲಾಗಿದೆ.
ವನ್ಯಜೀವಿಗಳ ಸ್ವರ್ಗ ಎನಿಸಿರುವ ಕಬಿನಿಯ ಹಿನ್ನೀರಿನ ಜಾಗ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಭಾಗದಲ್ಲಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹಾಗೂ ಮಳೆಯ ನೀರಿನಲ್ಲಿ ಕೊಚ್ಚಿ ಬರುವ ಪ್ಲಾಸ್ಟಿಕ್ ತ್ಯಾಜ್ಯಗಳು ಇಲ್ಲಿ ಬಂದು ಶೇಖರಣೆಯಾಗುತ್ತದೆ. ಇಂತಹ ಪ್ಲಾಸ್ಟಿಕ್ಗಳಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಇಲಾಖೆಯು ಕಬಿನಿ ಹಿನ್ನೀರಿನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿತು.
ಈ ವೇಳೆ ಸುಮಾರು 2 ಟನ್ ಪ್ಲಾಸ್ಟಿಕ್ ವಸ್ತುಗಳು, ಜೈವಿಕ ವೈದ್ಯಕೀಯ ತ್ಯಾಜ್ಯಗಳಾದ ಸಿರಿಂಜ್, ಬಿಯರ್ ಬಾಟಲ್ಗಳನ್ನು ಸಂಗ್ರಹಿಸಲಾಯಿತು. ಈ ತ್ಯಾಜ್ಯವನ್ನು ಮರುಬಳಕೆ ಮಾಡಲು ಮೈಸೂರು ನಗರದ ಕಾರ್ಖಾನೆಗೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.