ಮೈಸೂರು : ಈ ಬಾರಿ ದಸರಾ ಜಂಬೂಸವಾರಿಗೆ 4 ಕ್ಯಾಂಪ್ಗಳಿಂದ 14 ಆನೆಗಳನ್ನು ಗುರುತಿಸಿದ್ದೇವೆ. ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಡಿಸಿಎಫ್ ಕರಿಕಾಳನ್ 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಜಿಲ್ಲಾಡಳಿತದಿಂದ ದಸರಾ ಆಚರಣೆ ಕುರಿತು ಮಾಹಿತಿ ಹೊರಬಿದ್ದ ನಂತರ ದಸರಾ ಉನ್ನತ ಮಟ್ಟದ ಸಮಿತಿಯಿಂದ ಗಜಪಯಣದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದು ಕಾಡಿನಿಂದ ನಾಡಿಗೆ ಆನೆಗಳನ್ನು ಕರೆತರಲಾಗುತ್ತದೆ. ಸರಳ ದಸರಾ ಆಚರಿಸಲು ನಿರ್ಧರಿಸಿದರೆ 5 ರಿಂದ 7 ಆನೆಗಳನ್ನು ಮಾತ್ರ ಕರೆತರಲಾಗುವುದು ಎಂದು ಕರಿಕಾಳನ್ ತಿಳಿಸಿದರು.
ಗಜಪಡೆ ವಿವರ : ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಗೋಪಾಲಸ್ವಾಮಿ, ಆನೆಕಾಡು ಆನೆ ಶಿಬಿರದಿಂದ ವಿಕ್ರಮ, ವಿಜಯ, ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಹರ್ಷ, ಲಕ್ಷ್ಮಣ ಹಾಗೂ ಕಾವೇರಿ ಆನೆಗಳು. ರಾಂಪುರ ಆನೆ ಶಿಬಿರದಿಂದ ಚೈತ್ರಾ ಆನೆ ಗುರುತಿಸಲಾಗಿದ್ದು, 14 ಆನೆಗಳಲ್ಲಿ 11 ಗಂಡಾನೆ, 3 ಹೆಣ್ಣಾನೆಯನ್ನು ಗುರುತಿಸಿಲಾಗಿದೆ ಎಂದು ಡಿಸಿಎಫ್ ತಿಳಿಸಿದರು.
ದಸರಾ ಸಾರಥ್ಯವಹಿಸಲಿದ್ದಾನೆ 'ಅಭಿಮನ್ಯು' : ಕಳೆದ ಬಾರಿಯಂತೆ ಈ ಬಾರಿಯೂ ಅಭಿಮನ್ಯು ಆನೆ ಅಂಬಾರಿ ಹೊರುವ ಸಾಧ್ಯತೆ ಇದೆ. ಧನಂಜಯ ಹಾಗೂ ಗೋಪಾಲಸ್ವಾಮಿ ಆನೆ ಅಭಿಮನ್ಯುಗೆ ಸಾಥ್ ನೀಡುತ್ತಾರೆ. ಅದ್ದೂರಿ ದಸರಾವಾದರೆ 14 ಆನೆಗಳನ್ನು ಕರೆದುಕೊಂಡು ಬರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರಳ ದಸರಾವಾದರೆ 5 ರಿಂದ 7 ಆನೆಗಳನ್ನು ಕರೆದುಕೊಂಡು ಬರುತ್ತೇವೆ ಎಂದು ಅರಣ್ಯಾಧಿಕಾರಿ ಕರಿಕಾಳನ್ ಮಾಹಿತಿ ನೀಡಿದರು.
ಮಾವುತ, ಕಾವಾಡುಗಳಿಗೆ ಕೋವಿಡ್ ವ್ಯಾಕ್ಸಿನ್ : ಜಂಬೂಸವಾರಿಗೆ ಬರುವ ಎಲ್ಲಾ ಆನೆಗಳಿಗೂ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾವುತ ಮತ್ತು ಕಾವಾಡುಗಳಿಗೆ ಶೇ.95ರಷ್ಟು ಲಸಿಕೆ ಆಗಿದೆ. ಉಳಿದವರಿಗೆ ಇಲ್ಲೇ ಲಸಿಕೆ ಹಾಕಿಸಲಾಗುವುದು. ಇನ್ನು ಆನೆಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯವೇನಿಲ್ಲ. ಎಲ್ಲಾ ಆನೆಗಳು ಆರೋಗ್ಯವಾಗಿವೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಫ್ ಕರಿಕಾಳನ್ ತಿಳಿಸಿದರು.