ಮೈಸೂರು: ನಗರದ ಸೆನ್ (CEN) ಠಾಣೆ ಪೊಲೀಸರು ಸಾರ್ವಜನಿಕರು ಕಳೆದುಕೊಂಡಿದ್ದ 30 ಲಕ್ಷ ರೂಪಾಯಿ ಮೌಲ್ಯದ 100 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದಾರೆ. ಅವುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ. ಬುಧವಾರ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಮ್ಮ ಕಚೇರಿಯ ಸಭಾಂಗಣದಲ್ಲಿ ವಶಕ್ಕೆ ಪಡೆದ ಮೊಬೈಲ್ ಫೋನ್ಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸಿದರು. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಸೆನ್ ಠಾಣೆ ಪಿಐ ಯೋಗನಂಜಪ್ಪ, ಪಿಎಸ್‌ಐ ಪೂಜಾ ಹತ್ತರಕಿ ಹಾಗೂ ಸಿಬ್ಬಂದಿ ಇದ್ದರು.
ವಿವಿಧ ಕಾರಣಗಳಿಂದ ನಗರ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಕೆಎಸ್‌ಪಿ ಅಪ್ಲಿಕೇಷನ್‌ನಲ್ಲಿ ದೂರು ದಾಖಲಿಸಿ, ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್‌ನಲ್ಲಿ (ಸಿಇಐಆರ್) ಮತ್ತು ಮೈಸೂರು ನಗರ ಪೊಲೀಸ್ ಘಟಕದಿಂದ ಪ್ರಾರಂಭಿಸಲಾಗಿರುವ 6363255135 ಮೊಬೈಲ್ ನಂಬರ್ಗೆ Hi (ಹಾಯ್) ಎಂದು ಮೆಸೇಜ್ ಕಳುಹಿಸುವ ಮೂಲಕ ಕೇಳುವ ಮಾಹಿತಿ ಭರ್ತಿ ಮಾಡಿ ದೂರು ದಾಖಲಿಸಿದ್ದರು. ಈ ದೂರುಗಳನ್ನು ಪರಿಶೀಲಿಸಿ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ಸೆನ್ ಪೊಲೀಸರು 30 ಲಕ್ಷ ರೂ. ಮೌಲ್ಯದ 100 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಅವುಗಳ ವಾರಸುದಾರರಿಗೆ ಮರಳಿಸಿದರು.
ಕಳೆದು ಹೋದ ಮೊಬೈಲ್ ಐಎಂಇಐ ನಂಬರ್ ಆಧರಿಸಿ ಮೊಬೈಲ್ ಕಂಡುಹುಡುಕುವ, ಮೊಬೈಲ್ ಬಳಕೆ ಆಗದಂತೆ ಬ್ಲಾಕ್ ಮಾಡುವ ತಂತ್ರಜ್ಞಾನದ ಅವಕಾಶವನ್ನು ಸಿಇಐಆರ್ ಯೋಜನೆ ಒಳಗೊಂಡಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಯೋಜನೆಯನ್ನು 2019 ರಲ್ಲಿ ಗೋವಾ, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಜಾರಿ ಮಾಡಲಾಗಿತ್ತು. ನಂತರದಲ್ಲಿ ಕರ್ನಾಟಕದಲ್ಲಿ ಕಾರ್ಯಗತಗೊಳಿಸಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರ ಸಾವು: ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನರಸೀಪುರ ನಂಜನಗೂಡು ಮುಖ್ಯರಸ್ತೆಯ ತಾಯೂರು ಗೇಟ್ ಬಳಿ ನಡೆದಿದೆ. ಮೃತ ಗೆಜ್ಜಗನಹಳ್ಳಿ ಗ್ರಾಮದ ನಿವಾಸಿ ಮಹದೇವ ಸ್ವಾಮಿ (55) ಎಂದು ಗುರುತಿಸಲಾಗಿದೆ. ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸೇನಾ ವಾಹನಕ್ಕೆ ರಭಸವಾಗಿ ಗುದ್ದಿದ ಟ್ರಕ್, ಇಬ್ಬರು ಯೋಧರಿಗೆ ಗಾಯ: ವಿಡಿಯೋ