ಮಂಡ್ಯ: ಸ್ನೇಹಿತರ ದಿನದಂದೇ ಸ್ನೇಹಿತನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೀಲಾರ ಗ್ರಾಮದ ಜಯಂತ್ (23) ಸ್ನೇಹಿತನಿಂದಲೇ ಇರಿತಕ್ಕೊಳಗಾಗಿ ಪ್ರಾಣ ಕಳೆದುಕೊಂಡ ಯುವಕ. ಈತನ ಸ್ನೇಹಿತ ಕೀರ್ತಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸ್ನೇಹಿತರಾಗಿದ್ದ ಜಯಂತ್ ಮತ್ತು ಕೀರ್ತಿ ನಡುವೆ ಗ್ರಾಮದ ವರ್ಕ್‌ಶಾಪ್ ಹತ್ತಿರ ಭಾನುವಾರ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದು, ಈ ವೇಳೆ ರೊಚ್ಚಿಗೆದ್ದ ಕೀರ್ತಿ ಚಾಕುವಿನಿಂದ ಜಯಂತ್ಗೆ ಇರಿದಿದ್ದಾನೆ. ರಕ್ತದ ಮಡುವಿಲ್ಲಿ ಬಿದ್ದು ನರಳುತ್ತಿದ್ದ ಜಯಂತ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾಗಿದ್ದು, ಅಷ್ಟರಲ್ಲಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ: Ballari murder: ಕೆಎಸ್ಆರ್ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್ಪೆಕ್ಟರ್ ಹತ್ಯೆ
ಸ್ನೇಹಿತನಿಗೆ ಮಚ್ಚು ಬೀಸಿದ ಯುವಕ: ಹಣಕಾಸಿನ ವಿಚಾರಕ್ಕೆ ಕುಡಿದ ಅಮಲಿನಲ್ಲಿ ಕಿರಿಕ್ ಆಗಿ ಸ್ನೇಹಿತನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ನಡೆದಿತ್ತು. ನಂಜೇಗೌಡ (30) ಎಂಬಾತನ ಮೇಲೆ ಬಸವರಾಜ್ ಹಲ್ಲೆ ನಡೆಸಿದ್ದ. ಸೂಲಿಬೆಲೆ ಗ್ರಾಮದ ಬಸವರಾಜ್ ಹಾಗೂ ಹಲ್ಲೆಗೊಳಗಾದ ನಂಜೇಗೌಡ ಇಬ್ಬರೂ ಸ್ನೇಹಿತರಾಗಿದ್ದರು.
ನಂಜೇಗೌಡ ತನ್ನ ಸ್ನೇಹಿತ ಕೇಶವ ಎಂಬುವರಿಗೆ ಆರೋಪಿ ಬಸವರಾಜ್ ತಂದೆ ರತ್ನಪ್ಪನ ಮನೆಯಲ್ಲಿ ಬಾಡಿಗೆ ಮನೆ ಕೊಡಿಸಿದ್ದ. ಆದರೆ, ಕೆಲ ತಿಂಗಳು ಬಾಡಿಗೆ ಕಟ್ಟದೇ ಮನೆ ಖಾಲಿ ಮಾಡಲಾಗಿತ್ತು. ಮಾಲೀಕ ರತ್ನಪ್ಪ ಬಾಡಿಗೆ ಹಣವನ್ನು ಕೇಶವನ ಬಳಿ ಕೇಳುವ ಬದಲು ನಂಜೇಗೌಡನ ಬಳಿ ಪದೇ ಪದೆ ಕೇಳಿದ್ದಾನೆ. ಆಗ ನಂಜೇಗೌಡ ರತ್ನಪ್ಪನಿಗೆ ನಾನು ನಿನಗೆ ಹಣ ಕೊಡುವುದು ಇಲ್ಲ. ನಿಮ್ಮ ಮಗ ಬಸವರಾಜ್ನೇ ತನಗೆ ಹಣ ಕೊಡುವುದಿದೆ ಎಂದಿದ್ದ. ಈ ಬಗ್ಗೆ ರತ್ನಪ್ಪ ಹಾಗೂ ಬಸವರಾಜ್ ನಡುವೆ ಗಲಾಟೆ ಆಗಿತ್ತು. ಇದರಿಂದ ಕೋಪಗೊಂಡ ಬಸವರಾಜ್ ಬಳಿಕ ಸ್ನೇಹಿತ ನಂಜೇಗೌಡನ ಜೊತೆ ಜಗಳ ತೆಗೆದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಘಟನೆ ಬಗ್ಗೆ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜ್ನನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದರು.