ಮಂಡ್ಯ: ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣ ಗೌಡ ತಿಳಿಸಿದರು. ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಖುದ್ದು ಭೇಟಿ ಮಾಡಿದ ಸಚಿವ ಡಾ.ನಾರಾಯಣ ಗೌಡ ಅವರು ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಿದ್ದಾರೆ.
ಅಕ್ಟೋಬರ್ 13 ರಿಂದ 16ರ ವರೆಗೂ ಕೆಆರ್ ಪೇಟೆಯ ಲಕ್ಷ್ಮಣತೀರ್ಥ-ಹೇಮಾವತಿ-ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಮಹಾಕುಂಭ ಮೇಳದಲ್ಲಿ ಅಕ್ಟೋಬರ್ 16 ರಂದು ಪಾಲ್ಗೊಳ್ಳುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿರುವುದಾಗಿ ಸಚಿವರು ಹೇಳಿದರು.
ಮುಕ್ಕಾಲು ಗಂಟೆ ಮಾತುಕತೆ-ವಿಶೇಷ ಆತಿಥ್ಯ: ಡಾ.ನಾರಾಯಣ ಗೌಡ ಹಾಗೂ ನಿಯೋಗದ ಜೊತೆ ಮುಕ್ಕಾಲು ಗಂಟೆಗೂ ಅಧಿಕ ಕಾಲ ಯೋಗಿ ಆದಿತ್ಯನಾಥ್ ಅವರು ಮಾತುಕತೆ ನಡೆಸಿ, ವಿಶೇಷ ಆತಿಥ್ಯ ನೀಡಿದ್ದಾರೆ. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೂ ಗೋರಖನಾಥೇಶ್ವರನ ಸಂಬಂಧದ ಬಗ್ಗೆ ಯೋಗಿ ಮೆಲುಕು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಪರಶುರಾಮನ ಕಥೆ, ಕಾಲಬೈರವೇಶ್ವರನ ಕಥೆ, ಧರ್ಮಸ್ಥಳ ಮತ್ತು ಆದಿಚುಂಚನಗಿರಿಯ ಇತಿಹಾಸ ಹಾಗೂ ನಾಥ ಪರಂಪರೆಯ ಹಾಗೂ ಕರ್ನಾಟಕ ಸರ್ಕಾರ ಪ್ರಸ್ತುತ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಕುವೆಂಪು ಅವರ ರಾಮಯಣ ದರ್ಶನಂ ಹಾಗೂ ಎಸ್.ಎಲ್ ಭೈರಪ್ಪನವರ ಪರ್ವ ಪುಸ್ತಕವನ್ನು ಯೋಗಿ ಆದಿತ್ಯನಾಥ್ ಅವರಿಗೆ ಸಚಿವರು ನೀಡಿದರು.
ಇದನ್ನೂ ಓದಿ: ಅಕ್ಟೋಬರ್ 14 ರಿಂದ 16 ರ ವರೆಗೆ ತ್ರಿವೇಣಿ ಸಂಗಮದಲ್ಲಿ ಅದ್ಧೂರಿ ಮಹಾ ಕುಂಭಮೇಳ