ಮಂಡ್ಯ : ಸಚಿವ ನಾರಾಯಣ ಗೌಡ ಅವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿಯ ಕಲ್ಲು ಬಂಡೆಯೊಂದು ಬ್ಲಾಸ್ಟ್ ಆಗಿದೆ. ತಕ್ಷಣವೇ ಚಾಲಕ ಕಾರನ್ನು ನಿಲ್ಲಿಸಿದ್ದರಿಂದ ಸಚಿವರು ಸೇರಿದಂತೆ ನಾಲ್ಕು ಮಂದಿ ಅಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂಕಾಪುರ ಬಳಿ ನಡೆದಿದೆ.
ಬೆಂಗಳೂರು-ಜಲಸೂರು ರಸ್ತೆ ಕಾಮಗಾರಿಗಾಗಿ ಹಗಲು ವೇಳೆಯೇ ಬಂಡೆಯನ್ನು ಬ್ಲಾಸ್ಟ್ ಮಾಡಲಾಗಿತ್ತು. ಸಚಿವರು ಕೆಆರ್‌ಪೇಟೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನಾಗಮಂಗಲ ಮಾರ್ಗವಾಗಿ ತವರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬ್ಲಾಸ್ಟ್ ಆಗಿದ್ದರಿಂದ ದೊಡ್ಡದಾದ ಬಂಡೆ ರಸ್ತೆಗೆ ಬಂದಿದ್ದು, ಸಚಿವರ ಕಾರಿನ ಸಮೀಪವೇ ಬಿದ್ದಿದೆ.
ಸ್ಥಳೀಯರು ರಸ್ತೆಗೆ ಬಿದ್ದ ಬಂಡೆಯನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಟ್ಟ ನಂತರ ಸಚಿವರು ತೆರಳಿದರು. ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಪೊಲೀಸರಿಗೆ ಗುತ್ತಿಗೆದಾರನ ಬಂಧನಕ್ಕೆ ಸೂಚನೆ ನೀಡಿದರು. ಸಚಿವರ ಸೂಚನೆ ಮೇರೆಗೆ ಕೆ-ಶಿಫ್ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್ ರಾಜ್ನನ್ನು ಬಂಧಿಸಿದ್ದಾರೆ.