ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳು ಟೆಂಪಲ್ ರನ್ ಆರಂಭಿಸಿದ್ದಾರೆ. ಆದಿ ಚುಂಚನಗಿರಿ ಮಠಕ್ಕೆ ಚಲುವರಾಯಸ್ವಾಮಿ ನೇತೃತ್ವದಲ್ಲಿ ರಮೇಶ್ ಬಾಬು ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ನರೇಂದ್ರ ಸ್ವಾಮಿ, ಕಾಲಬೈರವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಿರ್ಮಲಾನಂದ ಸ್ವಾಮಿಗಳ ಆಶೀರ್ವಾದ ಪಡೆದು ಚುಂಚಶ್ರೀಗಳೊಂದಿಗೆ ಮಾತುಕತೆ ನಡೆಸಿದರು.
ಚುಂಚಶ್ರೀ ಶಿಸ್ತಿನ ಪಾಠ: ಮಠಕ್ಕೆ ಭೇಟಿ ನೀಡಿದ್ದ ವಿಜೇತ ಅಭ್ಯರ್ಥಿ ಗಣಿಗ ರವಿಕುಮಾರ್ ಅವರು ನಿರ್ಮಲಾನಂದ ಶ್ರೀಗಳ ಜೊತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ರವಿಕುಮಾರ್ ಶರ್ಟ್ ಬಟನ್ ಹಾಕದ್ದನ್ನು ಗಮನಿಸಿದ ಶ್ರೀಗಳು ಶರ್ಟ್ ಬಟನ್ ಹಾಕಿಕೊಳ್ಳುವಂತೆ ಸೂಚನೆ ನೀಡಿದರು.
ಪೂಜೆ ಬಳಿಕ ಚಲುವರಾಯಸ್ವಾಮಿ ಮಾತನಾಡಿ, ದೇವೇಗೌಡರು ನಮ್ಮ ತಂದೆ ಆಗಿದ್ದರೆ ಕೂತಿದ್ದ ಕಡೆ ಬಹಳ ಸುಖದ ನೆಮ್ಮದಿಯಿಂದ ನೋಡಿಕೊಳ್ಳುತ್ತಿದ್ದೆ. ದೇವೇಗೌಡರು ನನ್ನ ವಿರುದ್ಧ ಏನು ಮಾತನಾಡಿಲ್ಲ. ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರನ್ನು ಈ ವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆಯ ನಡುವೆ ಸುತ್ತಾಡಿಸಿದ್ದು ತಪ್ಪು. ಅವರು ಕೂತಿರುವ ಕಡೆ ಆಶೀರ್ವಾದ ತೆಗೆದುಕೊಂಡು ಬರಬೇಕಿತ್ತು. ಅವರ ಆಶೀರ್ವಾದ ತೆಗೆದುಕೊಂಡು ಚುನಾವಣೆ ಮಾಡಬೇಕಿತ್ತು. ರಾಜ್ಯ ಸುತ್ತಿಸಿದ್ದು ಸರಿಯಲ್ಲ. ಅವರನ್ನು ಸುತ್ತಿಸಿದವರಿಗೆ ದೇವರು ಬುದ್ಧಿ ಕೊಡಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಚಲುವರಾಯಸ್ವಾಮಿ ಪರೋಕ್ಷವಾಗಿ ಕಿಡಿಕಾರಿದರು.
ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರ ಪ್ರತಿಕ್ರಿಯಿಸಿದ ಅವರು, ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದ್ದಾರೆ. ಸಿಎಂ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಇಂದು ಶಾಸಕಾಂಗ ಸಭೆ ಇದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಡಿಕೆಶಿ, ಸಿದ್ದರಾಮಯ್ಯ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಎಲ್ಲರೂ ಸೇರಿ ಸಿಎಂ ಯಾರು ಎಂದು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿ, ಸಚಿವ ಸ್ಥಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. ಕಾದು ನೋಡಿ, ಮಂಡ್ಯದಲ್ಲಿ ಹೇಗೆ 6 ಜನರನ್ನ ಗೆಲ್ಲಿಸಿದ್ದಾರೆ, ಹಾಗೇ ಪಕ್ಷವು ಜಿಲ್ಲೆಗೆ ಬಂಪರ್ ಕೊಡುತ್ತದೆ. ನಮಗೆ ಅಭಿವೃದ್ಧಿನೇ ಮುಖ್ಯ ಎಂದು ಹೇಳಿದರು. ಒಟ್ಟಾರೆ ಮಂಡ್ಯ ಜಿಲ್ಲೆಯ ಕೈ ಶಾಸಕರು ಟೆಂಪಲ್ ರನ್ ನಡೆಸಿ ಚುಂಚ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇನ್ನೂ ಯಾರು ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 1 ಜೆಡಿಎಸ್, 1 ರೈತ ಸಂಘ, ಹಾಗೂ ಐವರು ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಜೆಡಿಎಸ್ ಭದ್ರಕೋಟೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಡ್ಯದಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿ, ಪ್ರಧಾನಿ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆಯಿಸಿ ಸಾಲು ಸಾಲು ಬೃಹತ್ ಸಮಾವೇಶ ನಡೆಸಿದರು ಗೆಲ್ಲಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ನೋಟಾದ ಆಟ: 10 ಕ್ಷೇತ್ರಗಳಲ್ಲಿ ಸೋಲಿನ ಅಂತರಕ್ಕಿಂತ ನೋಟಾ ವೋಟ್ ಹೆಚ್ಚು!