ಮಂಡ್ಯ: ಕೆ ಆರ್ ಪೇಟೆ ಶಾಸಕ ನಾರಾಯಣಗೌಡರು ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿರುವ ಹಿನ್ನೆಲೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಈ ಮಧ್ಯೆ ಕಾರ್ಯಕರ್ತರನ್ನು ನಡು ನೀರಲ್ಲಿ ಬಿಟ್ಟು ಶಾಸಕರು ಬಿಜೆಪಿ ಸೇರಲ್ಲವೆಂದು ಈ ಕ್ಷೇತ್ರದ ಜೆಡಿಎಸ್ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಕಮಲದ ಭೀತಿ ಜೆಡಿಎಸ್ ಕಾರ್ಯಕರ್ತರನ್ನು ಆತಂಕಕ್ಕೆ ದೂಡಿದೆ. ಕೆ.ಆರ್. ಪೇಟೆ ಜೆಡಿಎಸ್ ಶಾಸಕ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂಬ ವದಂತಿ ಹಿನ್ನಲೆ ಅಭಿಮಾನಿಗಳು ಇಂದು ಶಾಸಕರ ಮನೆ ಮುಂದೆ ಜಮಾಯಿಸಿದ್ದರು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ವದಂತಿಗಳನ್ನು ಹರಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿರುವ ನಾರಾಯಣಗೌಡರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ವಶದಲ್ಲಿದ್ದ ಪುರಸಭೆ ಆಡಳಿತವನ್ನು ಜೆಡಿಎಸ್ ತೆಕ್ಕೆಗೆ ತರುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ಎಲ್ಲಾ ಅಧಿಕಾರವನ್ನು ಕಳೆದುಕೊಂಡು ಹತಾಶರಾಗಿರುವ ಮಾಜಿ ಶಾಸಕರು ವದಂತಿಗಳನ್ನು ಹರಡುತ್ತಿರಬಹುದು ಎಂದು ಜೆಡಿಎಸ್ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ.