ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕೆಆರ್ಎಸ್ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಇದರಿಂದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಮೂರು ವರ್ಷಗಳ ಬಳಿಕ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ.
2019ರಲ್ಲಿ 1.64 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಸದ್ಯ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ 40 ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಇದೆ. ಮತ್ತೊಂದೆಡೆ ಪ್ರವಾಸಿ ತಾಣಗಳು, ಐತಿಹಾಸಿಕ ಕಟ್ಟಡಗಳಿಗೂ ಪ್ರವಾಹದ ಕಂಟಕ ಎದುರಾಗಿದೆ.
ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ್ ಮುಳುಗುವ ಸಾಧ್ಯತೆಯಿದೆ. 200 ವರ್ಷದ ಹಳೆಯದಾದ ವೆಲ್ಲೆಸ್ಲಿ ಸೇತುವೆಗೆ ಅಪಾಯ ಉಂಟಾಗಿದೆ. ಸದ್ಯ ನದಿ ತೀರದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ ಹೆಚ್ಚಿದೆ.
ಇದನ್ನೂ ಓದಿ: ಕೆಆರ್ಎಸ್ಗೆ ಭೇಟಿ ನೀಡಿದ ರಾಜಮಾತೆ ಪ್ರಮೋದಾದೇವಿ