ಮಂಡ್ಯ: ಲೋಕಸಭಾ ಚುನಾವಣೆಯ ಫಲಿತಾಂಶ ಕುತೂಹಲ ಘಟ್ಟದಲ್ಲಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭವಿಷ್ಯ ನಿರ್ಧಾರಕ್ಕೆ ಸರ್ಕಾರಿ ಮಹಾವಿದ್ಯಾಲಯ ಸಾಕ್ಷಿಯಾಗಲಿದೆ. ಇಲ್ಲಿ ನಡೆಯುವ ಮತ ಎಣಿಕೆ ಕಾರ್ಯಕ್ಕೆ ಚುನಾವಣೆ ಆಯೋಗ ಸಿದ್ಧತೆಯಲ್ಲಿ ತೊಡಗಿದೆ.
ಮಂಡ್ಯ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಇವಿಎಂಗಳು 16 ಭದ್ರತಾ ಕೊಠಡಿಯಲ್ಲಿ ಭದ್ರವಾಗಿದ್ದು, 15 ಕೊಠಡಿಗಳ 108 ಟೇಬಲ್‌ಗಳಲ್ಲಿ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ನಡೆಯಲಿದೆ. ಮೊದಲ ಕೊಠಡಿಯಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ.
ಮಂಡ್ಯ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ತಲಾ ಒಂದೊಂದು ಕೊಠಡಿಯಲ್ಲಿ ನಡೆದರೆ, ಉಳಿದಂತೆ ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ನಗರ, ಕೆ.ಆರ್.ಪೇಟೆ ಹಾಗೂ ಮೇಲುಕೋಟೆ ಕ್ಷೇತ್ರಗಳ ಇವಿಎಂ ಮತ ಎಣಿಕೆ ಎರಡೆರಡು ಕೊಠಡಿಗಳಲ್ಲಿ ನಡೆಯಲಿದೆ.
ಮಂಡ್ಯ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರದ ಎಣಿಕೆ ತಲಾ 12 ಟೇಬಲ್‌ಗಳಲ್ಲಿ ನಡೆದರೆ, ಉಳಿದ ಕ್ಷೇತ್ರಗಳ ಎಣಿಕೆ 14 ಟೇಬಲ್‌ಗಳಲ್ಲಿ ನಡೆಯಲಿದೆ ಹಾಗೂ ಅಂಚೆ ಮತಗಳು 5 ಟೇಬಲ್‌ಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್ ತಿಳಿಸಿದರು.
ಬಿಎಸ್ಎಫ್ ಯೋಧರ ಆಗಮನ:
ಎಣಿಕೆ ಕೇಂದ್ರದ ಬಳಿ ಭದ್ರತೆಗಾಗಿ ಬಿಎಸ್‌ಎಫ್ ಯೋಧರು ಹಾಗೂ ಒಂದು ತುಕಡಿ ಸಿಆರ್‌ಪಿಎಫ್ ಯೋಧರನ್ನು ನಿಯೋಜನೆ ಮಾಡಲಾಗಿದೆ. ಯೋಧರ ಜೊತೆ 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಪಿ ಪೇದೆಗಳು ಬಂದೋಬಸ್ತ್ ವಹಿಸಲಿದ್ದಾರೆ ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.