ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಪಣ ತೊಟ್ಟಿದ್ದಾರೆ. ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಕಮಲ ಕಲಿಗಳು ಇಂದು ಸಕ್ಕರೆ ನಾಡಲ್ಲಿ ಅಬ್ಬರದ ಪ್ರಚಾರದ ಮೂಲಕ ಧೂಳೆಬ್ಬಿಸುತ್ತಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಂದು ಮಳವಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿದರು. ಪ್ರಚಾರಕ್ಕೂ ಮುನ್ನವೇ ಅಸಮಾಧಾನಗೊಂಡಿದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಯಮದೂರು ಸಿದ್ದರಾಜು ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿ,"ಯಮದೂರು ಸಿದ್ದರಾಜು ಅವರು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷಕ್ಕಾಗಿ ದುಡಿದಂತವರು. ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಮೊದಲ ಬಾರಿಗೆ ಮಂಡ್ಯದ ಕೆಅರ್ ಪೇಟೆಯಲ್ಲಿ ಕಮಲ ಅರಳಿಸುವ ಕೆಲಸ ಆಗಿದೆ. ಈ ಬಾರಿ ಸಿದ್ದರಾಜು ಅವರು ಸೇರಿ ಕಾರ್ಯಕರ್ತರು ಒಗ್ಗಟ್ಟಾಗಿ ಮುನಿರಾಜು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ ಪ್ರತಿಕ್ರಿಯಿಸಿದ ಅವರು "ಯಡಿಯುರಪ್ಪನವರನ್ನು ಮುಗಿಸಲು ಸಾಧ್ಯವಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಓಡಾಡುತ್ತಿದ್ದಾರೆ. ಆ ರೀತಿಯ ಕುತಂತ್ರ ಬಿಜೆಪಿಯಲ್ಲಿ ನಡೆಯುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಪರ ಶ್ರಮಿಸುತ್ತಿದ್ದಾರೆ. ಬಿಜೆಪಿ ಪಕ್ಷ ಪ್ರಾಮಾಣಿಕವಾಗಿ ಗಟ್ಟಿ ನಿರ್ಧಾರ ಮಾಡಿದೆ. ಮಳವಳ್ಳಿ ಕ್ಷೇತ್ರ ಒಂದೆ ಅಲ್ಲ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ವರದಾನ ಆಗುತ್ತೆ ಎಂದು ಹೇಳಿದರು.
ಇನ್ನೂ ಮಳವಳ್ಳಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ ಬಿ.ವೈ.ವಿಜಯೇಂದ್ರಗೆ ಪಟಾಕಿ ಸಿಡಿಸಿ ಬೃಹತ್ ಹಾರ ಹಾಕಿ ಪುಷ್ಪಾವೃಷ್ಟಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಬಳಿಕ ಮಳವಳ್ಳಿ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ನಂತರ ಭಾಷಣ ಮಾಡಿದ ಅವರು "ಮಳವಳ್ಳಿಯಲ್ಲಿ ಕಾರ್ಯಕರ್ತರ ಉತ್ಸಾಹ ನೋಡಿದರೆ ಮುನಿರಾಜಣ್ಣ ಈ ಬಾರಿ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಮಳವಳ್ಳಿಯಲ್ಲಿ ಬಿಜೆಪಿ ಈ ಬಾರಿ ಗೆಲ್ಲುತ್ತೆ. ಗೆದ್ದು ಹೊಸ ಇತಿಹಾಸ ನಿರ್ಮಿಸುತ್ತೆ. ಮುನಿರಾಜಣ್ಣ ಗೆದ್ದರೇ ವಿಜಯೇಂದ್ರಣ್ಣ, ನಿಮ್ಮ ಯಡಿಯೂರಪ್ಪನವರು ಗೆದ್ದಂತೆ. ಮೇ 13ಕ್ಕೆ ನಾನು ಮಳವಳ್ಳಿಗೆ ಬರ್ತೀನಿ. ಒಟ್ಟಿಗೆ ಸೇರಿ ಪಟಾಕಿ ಹೊಡೆಯೋಣಾ, ಎಲ್ಲರೂ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಒಟ್ಟಾರೆ ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ವಿಜಯೇಂದ್ರ ಪಾಂಡವಪುರ ಹಾಗೂ ಮಳವಳ್ಳಿ ಅಬ್ಬರದ ಪ್ರಚಾರದ ಮೂಲಕ ಮಂಡ್ಯದಲ್ಲಿ ಮತ್ತಷ್ಟು ಕಮಾಲ್ ಮಾಡಲು ಹೊರಟಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ತೆನೆ ಇಳಿಸಿ, ಕಮಲ ಮುಡಿದ ಮುಖಂಡರು: ಕೆಆರ್ ಪೇಟೆಗೆ ಆಗಮಿಸಿದ್ದ ಸಚಿವ ಅಶ್ವತ್ಥ್ ನಾರಾಯಣ್ ಸಮ್ಮುಖದಲ್ಲಿ ಜೆಡಿಎಸ್ ಪುರಸಭಾ ಸದಸ್ಯ ಬಸ್ ಸಂತೋಷ್, ತಾ.ಪಂ ಮಾಜಿ ಉಪಾಧ್ಯಕ್ಷ ರಾಜಾಹುಲಿ ದಿನೇಶ್ ಸೇರಿದಂತೆ ಅನೇಕರು ತೆನೆ ಇಳಿಸಿ, ಕಮಲ ಮುಡಿದರು. ಜೆಡಿಎಸ್ ನಾಯಕರನ್ನು ಬಿಜೆಪಿಗೆ ಬರಮಾಡಿಕೊಂಡು ನಂತರ ಮಾತನಾಡಿದ ಅಶ್ವತ್ಥ್ ನಾರಾಯಣ್, "ನಾರಾಯಣಗೌಡ ಅವರು ಗೆದ್ದ ಬಳಿಕ ಸಚಿವರನ್ನಾಗಿ ಬಿಜೆಪಿ ಮಾಡಿದೆ. ನಾರಾಯಣಗೌಡರು ಸಚಿವರಾಗಿ ಅಪಾರ ಅಭಿವೃದ್ಧಿ ಮಾಡಿದ್ದಾರೆ. ರೇಷ್ಮೆ ಹಾಗೂ ಕ್ರೀಡಾ ಇಲಾಖೆಯಲ್ಲಿ ದಾಖಲೆಯ ಅಭಿವೃದ್ಧಿ ಮಾಡಿದ್ದಾರೆ. ಅಧಿಕಾರ ತೆಗೆದುಕೊಳ್ಳುವುದು ಅಭಿವೃದ್ಧಿಗಾಗಿ ಎಂದರು.
ಕೆಲಸ ಮಾಡದೇ ಕೆಲವರು ಕಣ್ಣೀರು ಸುರಿಸಿಕೊಂಡು ಮತಹಾಕಿ ಅಂತಾರೆ. ಕುಮಾರಸ್ವಾಮಿ ಅವರನ್ನು ಯಾಕೆ ಸಿಎಂ ಮಾಡುತ್ತೀರಾ?. ಜೆಡಿಎಸ್‌ಗೆ ಮತ ನೀಡಿದರೆ ನಮ್ಮ ಕಣ್ಣು ನಾವು ಕಿತ್ತುಕೊಂಡ ಹಾಗೆ. ನಾರಾಯಣಗೌಡ ಅವರಿಗೆ ಮತ ನೀಡಿ, ಬಿಜೆಪಿಗೆಯನ್ನು ಗೆಲ್ಲಿಸಿ. ಕಾಂಗ್ರೆಸ್ 79 ಸೀಟನ್ನು ಯಾವುದೇ ಕಾರಣಕ್ಕೂ ದಾಟುವುದಿಲ್ಲ. ಅವರು ಈಗ ಗೆದ್ದಿರುವಷ್ಟೇ ಗೆಲ್ಲೋದು. ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿ. ಜೆಡಿಎಸ್ ಕಾಂಗ್ರೆಸ್‌ಗೆ ಮತ ನೀಡಿದರೆ ಪ್ರಯೋಜನ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಚುನಾವಣಾ ಅಖಾಡದಲ್ಲಿ ಸ್ಟಾರ್ ಕ್ಯಾಂಪೇನರ್ಸ್: ತಾರಾ ಪ್ರಚಾರಕರಿಗಿರುವ ಪ್ರಾಮುಖ್ಯತೆ, ಷರತ್ತು ನಿಬಂಧನೆಗಳೇನು?