ಮಂಡ್ಯ: ದಕ್ಷಿಣ ಭಾರತದ ಬಹು ಭಾಷಾ ತಾರೆ, ಕನ್ನಡ ನಾಡಿನ ಅಮ್ಮ ಲೀಲಾವತಿ ಅವರ ನಿಧನಕ್ಕೆ ಕಾವೇರಿ ಹೋರಾಟಗಾರರು ಕಂಬನಿ ಮಿಡಿದರು. ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಲೀಲಾವತಿ ಭಾವಚಿತ್ರ ಇರಿಸಿ ಮೌನ ಆಚರಿಸುವ ಮೂಲಕ ಅಗಲಿದ ಹಿರಿಯ ಚೇತನಕ್ಕೆ ಸಂತಾಪ ಸೂಚಿಸಿದರು.
ಕನ್ನಡ ನಾಡು ಕಂಡ ಅಪ್ರತಿಮ ಕಲಾವಿದೆ ಲೀಲಾವತಿ ಅವರು ಇಳಿವಯಸ್ಸಿನಲ್ಲಿಯೂ ಕಾವೇರಿ ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ಭಾಗಿಯಾಗಿ ತಮ್ಮ ಹೋರಾಟಕ್ಕೆ ನೈತಿಕ ಶಕ್ತಿ ತುಂಬಿದ್ದನ್ನು ಹೋರಾಟಗಾರರು ಸ್ಮರಿಸಿದರು. ಕಳೆದ ಸೆ. 25 ರಂದು ಕಾವೇರಿ ಹೋರಾಟದಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕಾವೇರಿ ನಮ್ಮದು, ಯಾರು ಕಣ್ಣೀರು ಹಾಕಬಾರದು ಎಂದು ಹೋರಾಟಗಾರರಿಗೆ ಧೈರ್ಯ ತುಂಬಿದ್ದರು.
ಕಾವೇರಿ ಪರ ಹೋರಾಟಗಾರರಾದ ಸುನಂದ ಜಯರಾಂ ಮಾತನಾಡಿ, ಜನಮಾನಸದ ಕಲಾವಿದೆ ಲೀಲಾವತಿ ಬದುಕು ಎಲ್ಲರಿಗೂ ಮಾದರಿ. ಅವರು ಅದ್ಭುತ ಕಲಾವಿದೆ, ಸಮಾಜಮುಖಿ ಜೀವನ, ಆದರ್ಶ ಪ್ರಾಯ ಬದುಕು, ಮಗನನ್ನು ಸತ್ಪ್ರಜೆಯಾಗಿ ಬೆಳೆಸಿದ ರೀತಿ ಎಲ್ಲವನ್ನು ನೋಡಿದರೆ ಅವರ ಬದುಕು ಕನ್ನಡಿಗರಿಗೆ ದಾರಿದೀಪ, ಕಾವೇರಿ ಹೋರಾಟದ ಧರಣಿಯಲ್ಲಿ ಲೀಲಾವತಿ ಅವರು ಭಾಗಿಯಾಗಿ, ನಮ್ಮ ಹೋರಾಟಕ್ಕೆ ಪ್ರೋತ್ಸಾಹಿಸಿದ್ದರು ಎಂದು ಸ್ಮರಿಸಿದರು.
ಧರಣಿ ಸ್ಥಳದಲ್ಲಿ ಅಂದು ಮಾತನಾಡಿದ್ದ ಅವರು, ಕಾವೇರಿಗಾಗಿ ಯಾರು ಸಹ ಕಣ್ಣೀರು ಹಾಕಬಾರದೆಂದು ಹೇಳಿದ್ದ ಮಾತನ್ನು ಸರ್ಕಾರ ಜವಾಬ್ದಾರಿಯಿಂದ ಹೊಣೆಗಾರಿಕೆ ಪ್ರದರ್ಶಿಸಿದ್ದರೆ ಇಷ್ಟೊತ್ತಿಗೆ ಕರ್ನಾಟಕದ ಜನತೆಗೆ ನ್ಯಾಯ ಸಿಗುತ್ತಿತ್ತು ಎಂದು ತಿಳಿಸಿದರು.
ಜೈ ಕರ್ನಾಟಕ ಪರಿಷತ್ ಜಿಲ್ಲಾಧ್ಯಕ್ಷ ನಾರಾಯಣ್ ಕೂಡ ಲೀಲಾವತಿ ಅವರನ್ನು ನೆನೆದರು ಹಾಗೂ ಅವರ ಸಹಿ ಮಾತ್ರ ಇನ್ನು ನೆನಪು ಎಂದು ಸ್ಮರಿಸಿದರು.
ಕಾವೇರಿ ನೀರು ಹೋರಾಟಕ್ಕೆ ಶಕ್ತಿ ತುಂಬಿದ್ದ ಲೀಲಾವತಿ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸೆ. 25 ರಂದು ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಭಾಗವಹಿಸಿ ಬೆಂಬಲ ಸೂಚಿಸಿದ್ದರು.
ಅನಾರೋಗ್ಯದ ಸ್ಥಿತಿಯಲ್ಲೂ ಲೀಲಾವತಿ ಅವರು ಕಾವೇರಿ ಹೋರಾಟದಲ್ಲಿ ಭಾಗವಹಿಸಿ ಕಾವೇರಿ ಹೋರಾಟಗಾರರಲ್ಲಿ ಶಕ್ತಿ ತುಂಬಿದ್ದರು. ಈ ವೇಳೆ ಮಾತನಾಡಿದ್ದ ನಟ ವಿನೋದ್ ರಾಜ್, ಪ್ರತಿ ಬಾರಿ ಕೂಡ ನಮಗೆ ಅನ್ಯಾಯವಾಗುತ್ತಿದೆ. ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸಂಕಷ್ಟ ಸೂತ್ರ ಅನಿವಾರ್ಯ ಎಂದು ಹೇಳಿದ್ದರು.
ಇದನ್ನೂಓದಿ:ಲೀಲಾವತಿ ಅಮ್ಮನ ನೆನೆದು ಕಣ್ಣೀರಿಟ್ಟ ನಟ ಕುಮಾರ್ ಗೋವಿಂದ್!