ಮಂಡ್ಯ: ಕಾಲಭೈರವನ ಕೃಪೆ ಸಿಎಂ ಪುತ್ರನ ಮೇಲೆ ಇದ್ಯಾ. ಯಾಕೆಂದರೆ, ಸಾಮಾನ್ಯವಾಗಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಯಾವುದೇ ಚುನಾವಣೆ ಎದುರಿಸಿದರೂ ಮೊದಲು ಕಾಲಭೈರವನ ಮೊರೆ ಹೋಗುತ್ತಾರೆ. ಅದೇ ರೀತಿಯಾಗಿ ತಮ್ಮ ಪುತ್ರನ ನಾಮಪತ್ರ ಸಲ್ಲಿಕೆಗಾಗಿ ಕಾಲಭೈರವನ ಮೊರೆ ಹೋಗಿ, ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು.
ನಾಗಮಂಗಲ ತಾಲ್ಲೂಕಿನ ಆದಿ ಚುಂಚನಗಿರಿಗೆ ಮಾಜಿ ಪ್ರಧಾನಿ ದೇವೇಗೌಡ, ಪುತ್ರ ನಿಖಿಲ್ ಕುಮಾರಸ್ವಾಮಿ ಜೊತೆ ಚುಂಚನಗಿರಿ ಮಠಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಕಾಲಭೈರವೇಶ್ವರನಿಗೆ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು.
ನಾಳೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ನಿರ್ಧಾರದ ಮೊದಲ ಮೆಟ್ಟಿಲು ಏರುತ್ತಿದ್ದಾರೆ. ಹೀಗಾಗಿ ಕಾಲ ಭೈರವನ ಕೃಪೆಗಾಗಿ ಸಿಎಂ ಕುಟುಂಬ ಪೂಜೆ ಮಾಡಿಸಿದೆ ಎಂದು ಹೇಳಲಾಗಿದೆ. ನಾಳೆ ಅಪಾರ ಕಾರ್ಯಕರ್ತರ ಸಮ್ಮುಖದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾಳೆ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ 2 ರಿಂದ 3 ಗಂಟೆ ಒಳಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 11 ಗಂಟೆಗೆ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ನಾಳೆಯಿಂದ ನಿಜವಾದ ರಾಜಕೀಯ ಯುದ್ಧ ಶುರುವಾಗಲಿದೆ. ಕರ್ನಾಟಕ ರಾಜ್ಯದಲ್ಲಿ 8 ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ 20 ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿವೆ. ಆದರೆ ಕೆಲವೊಂದು ಕ್ಷೇತ್ರದಲ್ಲಿ ಗೊಂದಲವಿದ್ದರೂ ಆ 8 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಅದಕ್ಕೆ ಬೇಕಾದ ಎಲ್ಲಾ ಸ್ಟಾಟರ್ಜಿಗಳನ್ನು ನಾವು ಮಾಡಿಕೊಂಡಿದ್ದೇವೆ. ಕೆಲವೊಂದು ಕ್ಷೇತ್ರದಲ್ಲಿ ಗೊಂದಲ ಭಿನ್ನಾಭಿಪ್ರಾಯವಿದ್ದರೂ ಕಾರ್ಯಕರ್ತರ ಶಕ್ತಿ ಬೆನ್ನಿಗಿರೋ ಕಾರಣದಿಂದ ನಮಗೆ ಆತಂಕವಿಲ್ಲ ಎಂದರು.
ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ಯಾವುದೇ ವ್ಯಕ್ತಿಗಳ ಬಗ್ಗೆ ವ್ಯಕ್ತಿಗತವಾಗಿ ಮಾತನಾಡದಂತೆ ಸೂಚಿಸಿದ್ದೇನೆ. ಕೆಲವು ಕೃತಕ ಶಕ್ತಿಗಳು ಮಂಡ್ಯ ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಏನೇ ಮಾತನಾಡಿದರೂ ಮತದಾರು ಉತ್ತರ ಕೊಡ್ತಾರೆ ಎಂದರು.
ದರ್ಶನ್ ಮನೆಗೆ ಕಲ್ಲು ತೂರಾಟ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಸಿನಿಮಾ ಡ್ರಾಮ ಪ್ರಕರಣದಂತೆ ಕಾಣುತ್ತಿದೆ. ಆ ತಕ್ಷಣವೇ ನಾನು ದರ್ಶನ್ ಮನೆಗೆ ರಕ್ಷಣೆ ಕೊಡುವಂತೆ ಹೇಳಿದ್ದೆ. ಪೊಲೀಸರು ವಿಚಾರಣೆ ನಡೆಸೋ ವೇಳೆ ಆ ಮನೆ ಮತ್ತು ಬೀದಿಯಲ್ಲಿ ಇದ್ದ ಸಿಸಿಟಿವಿ ಆಫ್ ಆಗಿದೆ. ಇದರಲ್ಲೆ ಗೊತ್ತಾಗಿದೆ ಇದೊಂದು ಸಿನಿಮಾ ಪ್ರಕರಣ ಎಂದು ಎಂದರು.
ಇನ್ನು ಜಿಲ್ಲೆಯಲ್ಲಿ ಕೆಲವಡೆ ನಿಖಿಲ್ ಗೋ ಬ್ಯಾಕ್ ವಿಚಾರ ಹಬ್ಬಿದೆ. ನಾನು ನಾಳೆ ಅದೇ ಸ್ಥಳಕ್ಕೆ ಹೋಗಿ ಅಲ್ಲಿನ ಜನರೊಂದಿಗೆ ಮಾತನಾಡುತ್ತೇನೆ. ಮಾಧ್ಯಮಗಳು ಕೇವಲ ಇದನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಇಂತಹ ಅಪಪ್ರಚಾರದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜಿಲ್ಲೆಯ ಮತದಾರರ ಬಂದುಗಳು ನಮ್ಮ ಪಕ್ಷದ ಪರವಾಗಿ ಇದ್ದಾರೆ. ಜಿಲ್ಲೆಯಲ್ಲಿ ನಿಖಿಲ್ ವಿರುದ್ಧ ಯಾರೆಲ್ಲ ಒಂದಾಗಿದ್ದಾರೆ ಅನ್ನೋನ್ನು ಜಿಲ್ಲೆಯ ಜನರು ಗಮನಿಸ್ತಿದ್ದಾರೆ. ನಿಖಿಲ್ ಸೋಲಿಗಾಗಿ ಏನೇ ಮಾಡಿದರೂ ಜಿಲ್ಲೆಯ ಜನರು ನಮ್ಮ ಪರವಾಗಿ ಇದ್ದಾರೆ. ರಾಕ್ಲೈನ್ ವೆಂಕಟೇಶ್ ಕೋಟಿ ರೂ. ತಂದು ಸುರೀತೀನಿ ಅಂದಿದ್ದಾರೆ. ಅವರಿಗೆ ಅಷ್ಟೆಲ್ಲಾ ದುಡ್ಡು ಎಲ್ಲಿಂದ ಬರ್ತಿದೆ ಅನ್ನೋದು ಗೊತ್ತಿಲ್ಲ ಎಂದರು. ಆದರೆ ಯಾರೋ ಒಬ್ಬರು ಜಿಲ್ಲೆಯಲ್ಲಿ ನಿಮ್ಮವರೆ 8 ಶಾಸಕರಿದ್ದು, ಯಾಕೇ ಆತಂಕ ಅಂದಿದ್ದಾರೆ. ನಾವೇನು ಆತಂಕಗೊಂಡಿಲ್ಲ ಅನ್ನೋ ಮೂಲಕ ಸುಮಲತಾಗೆ ಮಾತಿನ ಟಾಂಗ್ ಕೊಟ್ಟರು.