ಮಂಡ್ಯ: ಸಕ್ಕರೆ ನಾಡಿನಲ್ಲೊಂದು ವಿಚಿತ್ರ ಎಂಬಂತಹ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲೆಂದೇ ರಾತ್ರೋರಾತ್ರಿ ಅಂಗನವಾಡಿಗೆ ನುಗ್ಗಿದ್ದ ಖದೀಮನೋರ್ವ ಆ ಸ್ಥಳದಲ್ಲಿ ಸಾಹಿತಿಯಾಗಿದ್ದಾನೆ. ಬೆಲೆ ಬಾಳುವ ವಸ್ತುಗಳು ಸಿಗಬಹುದೆಂದು ಮೂಲೆ ಮೂಲೆ ಜಾಲಾಡಿದ್ದ ಆತನಿಗೆ ಕೊನೆಗೆ ಏನು ಸಿಗದಿದ್ದಾಗ ಅಡುಗೆ ತಯಾರಿಸಿ ಊಟ ಮಾಡಿದ್ದಾನೆ. ಬಳಿಕ ಕಥೆ, ಕವನ ಬರೆದಿಟ್ಟು ಪರಾರಿಯಾಗಿದ್ದಾನೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ.
ಖದೀಮನೊಬ್ಬ ಅಂಗನವಾಡಿಯ ಬೀಗ ಮುರಿದು ಒಳಗೆ ನುಗ್ಗಿದ್ದನು. ಬೆಲೆ ಬಾಳುವ ವಸ್ತುಗಳು ಏನಾದರೂ ಸಿಗತ್ತವೆ ಅಂದುಕೊಂಡಿದ್ದ ಆತನ ನಿರೀಕ್ಷೆ ಹುಸಿಯಾಗಿತ್ತು. ಅಲ್ಲಿದ್ದ ಬಿರುವಾ ಮತ್ತು ದಿನಸಿ ದಾಸ್ತಾನು ರೂಮಿನ ಬೀಗ ಮುರಿದು ಜಾಲಾಡಿದರೂ ಆತನಿಗೆ ಏನೂ ಸಿಕ್ಕಿಲ್ಲ.
ಕೊನೆಗೆ ಅಲ್ಲಿದ್ದ ಸಾಮಾಗ್ರಿಗಳಿಂದ ಗ್ಯಾಸ್ನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾನೆ. ಬಳಿಕ ನೋಟ್ ಪುಸ್ತಕದಲ್ಲಿ ಎರಡು ಪುಟಗಳಲ್ಲಿ ಜೀವನದಲ್ಲಿ ತನಗಾಗಿರುವ ಅನುಭವಗಳನ್ನು ಕವನ, ಕಥೆ ರೂಪದಲ್ಲಿ ಬರೆದು ಜಾಗ ಖಾಲಿ ಮಾಡಿದ್ದಾನೆ.
ಬುಧವಾರ ಬೆಳಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ಹಾಗೂ ಸಹಾಯಕಿ ಮಹದೇವಮ್ಮ ಕರ್ತವ್ಯಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಮಾಹಿತಿ ಪಡೆದುಕೊಂಡ ಪಂಡಿತಹಳ್ಳಿ ಗ್ರಾಮ ಪಂಚಾಯತ್ ಪಿಡಿಒ ಮಹದೇವು ಸ್ಥಳ ಪರಿಶೀಲಿಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಡುಗೆ ತಯಾರಿಸಿಕೊಂಡು ಊಟ ಮಾಡಿರೋದು ಬಿಟ್ಟರೆ ಯಾವುದೇ ವಸ್ತುಗಳನ್ನ ಆತ ಕಳವು ಮಾಡದೇ ಬರಿಗೈಯಲ್ಲಿ ವಾಪಸಾಗಿದ್ದಾನೆ ಎಂದು ತಿಳಿದುಬಂದಿದೆ.