ಮಂಡ್ಯ: ಅನುಮತಿಯಿಲ್ಲದೆ ಮದುವೆ ಕಾರ್ಯ ನಡೆಸುತ್ತಿದ್ದ ನಾಲ್ಕು ಕಡೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಕೆ.ಆರ್. ಪೇಟೆ ತಾಲೂಕಿನ ಮುರುಕನಹಳ್ಳಿ, ಕ್ಯಾತನಹಳ್ಳಿ, ನಂದೀಪುರ ಮತ್ತು ಹರಿರಾಯನ ಹಳ್ಳಿ ಗ್ರಾಮದಲ್ಲಿ ಅನುಮತಿಯಿಲ್ಲದೆ ಜನರ ಗುಂಪು ಸೇರಿಸಿ ವಿವಾಹ ಕಾರ್ಯ ನಡೆಸಲಾಗುತ್ತಿದ್ದು, ಸ್ಥಳೀಯ ಗ್ರಾಮ ಸಹಾಯಕರ ಮೂಲಕ ಮಾಹಿತಿ ತಿಳಿದ ತಕ್ಷಣವೇ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸರು ತಮ್ಮ ವ್ಯಾಪ್ತಿಯ ವಿವಾಹ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ವಧು-ವರರು ಮತ್ತು ಅವರ ತಂದೆ-ತಾಯಿಗಳನ್ನು ಬಂಧಿಸಿ, ನಂತರ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಿಕೊಂಡು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಹಶೀಲ್ದಾರ್ ಎಂ. ಶಿವಮೂರ್ತಿ ಮಾಹಿತಿ ನೀಡಿದರು.
ಕೆ.ಆರ್. ಪೇಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದ ಕೋವಿಡ್ ಸಕ್ರಿಯ ಪ್ರಕರಣಗಳು ಕಳೆದೆರಡು ದಿನಗಳಿಂದ ಮತ್ತೆ ಹೆಚ್ಚಾಗಿವೆ. ಇದಕ್ಕೆ ಜನರ ಅಸಹಕಾರವೇ ಬಹುಮುಖ್ಯ ಕಾರಣ ಎಂದ ತಹಶೀಲ್ದಾರ್, ಸಚಿವ ಕೆ.ಸಿ.ನಾರಾಯಣಗೌಡರು ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಯಾವುದೇ ರಾಜಕೀಯ ಪ್ರಭಾವ ಮತ್ತು ಒತ್ತಡಕ್ಕೆ ಮಣಿಯದ ತಾಲೂಕು ಆಡಳಿತ ಕಾನೂನು ಚೌಕಟ್ಟಿನಲ್ಲಿ ತನ್ನ ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಬುಧವಾರ ಮತ್ತು ಶುಕ್ರವಾರ ಮಾತ್ರ ನಿಯಮಿತ ಅವಧಿಯಲ್ಲಿ ತೆರೆಯಲು ಅವಕಾಶವಿದ್ದು ಮಿಕ್ಕ ಅವಧಿಯಲ್ಲಿ ತೆರೆಯುವಂತಿಲ್ಲ. ನಿಯಮ ಮೀರಿ ಅಂಗಡಿ ತೆರೆದ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.