ಮಂಡ್ಯ: ಸ್ಕ್ಯಾನಿಂಗ್ ವೇಳೆ ಗರ್ಭೀಣಿ ಭ್ರೂಣದ ಅಸಹಜ ಬೆಳವಣಿಗೆಯನ್ನು ಪತ್ತೆ ಹಚ್ಚದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಮದ್ದೂರಿನ ಡಿ2 ಡಯನ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ. ದಂಡ ವಿಧಿಸಿ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ.
ಮದ್ದೂರು ಕೆಎಸ್ ಆರ್ ಟಿಸಿ ನಿಲ್ದಾಣದ ಬಳಿ ಇರುವ ಡಿ 2 ಡಯನ್ನೋಸ್ಟಿಕ್ ಸೆಂಟರ್ ಗೆ ಗೊರವನಹಳ್ಳಿ ಗ್ರಾಮದ ಮಹೇಶ್ ನ ಪತ್ನಿ ಸಿಂಧೂಶ್ರೀ(25) ಅವರು, 3 ವರ್ಷದ ಹಿಂದೆ 5ನೇ ತಿಂಗಳ ಗರ್ಭೀಣಿಯಾಗಿದ್ದ ವೇಳೆ ಭ್ರೂಣದ ಬೆಳೆವಣಿಗೆ ತಿಳಿದುಕೊಳ್ಳಲು ಸ್ಕ್ಯಾನಿಂಗ್ ಗೆ ಹೋಗಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡಿದ ಡಾ.ದೀಪಕ್ ಗೌತಮ್ ಎಂಬ ವೈದ್ಯರು, ಭ್ರೂಣವು ಸಹಜ ಬೆಳವಣಿಗೆಯಲ್ಲಿದೆ ಎಂದು ಸುಳ್ಳು ವರದಿ ನೀಡಿದ್ದರು. ಆದರೆ, ಸಿಂಧೂಶ್ರೀ ಅವರಿಗೆ ಜನಿಸಿದ ಹೆಣ್ಣು ಮಗು ಅಸಹಜತೆಯಿಂದ ಕೂಡಿದ್ದರಿಂದ ಮನನೊಂದ ಸಿಂಧೂಶ್ರೀ ಕುಟುಂಬ,ನಂತರ ಸ್ಕ್ಯಾನಿಂಗ್ ಸೆಂಟರ್ ಹಾಗೂ ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ದಾಖಲಿಸಿದ್ದರು.
ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಸಿ.ಎಂ.ಚಂಚಲ ಅವರು ಈ ಪ್ರಕರಣ ವಿಚಾರಣೆ ನಡೆಸಿದರು. ಸ್ಕ್ಯಾನಿಂಗ್ ಸೆಂಟರ್ ದ ವೈದ್ಯರ ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆ ನೊಂದ ಮಹಿಳೆಗೆ 15 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ನೊಂದ ಮಹಿಳೆ ಪರವಾಗಿ ನ್ಯಾಯವಾದಿ ಮಂಡ್ಯದ ಆರ್.ಜಗನ್ನಾಥ್ ವಾದ ಮಂಡಿಸಿದ್ದರು.
ಇದನ್ನೂ ಓದಿ:ವೃದ್ಧೆ ಅತ್ಯಾಚಾರ ಮಾಡಿ, ಹಣ ದೊಚಿದ್ದ ಆರೋಪಿಗೆ ಕಠಿಣ ಶಿಕ್ಷೆ..