ಮಂಡ್ಯ: ಕೆಆರ್‌ಎಸ್ ಜಲಾಶಯ ಜಿಲ್ಲೆಯ ಜನರ ಜೀವನಾಡಿ, ಸಿಲಿಕಾನ್ ಸಿಟಿ ಜನರಿಗೂ ಜೀವಜಲ. ತಮಿಳಿಗರ ಒಡಲ ಜೀವ. ಈ ಜೀವಜಲದ ಅಣೆಕಟ್ಟು 120.80 ಅಡಿ ತುಂಬಿ 50 ದಿನಗಳು ಕಳೆದಿದೆ.
2006 ವರ್ಷ ಹೊರತು ಪಡಿಸಿದರೇ ಇದೇ ಮೊದಲ ಬಾರಿಗೆ 50 ದಿನಗಳ ತನಕ ತುಂಬಿದ್ದು, 60ನೇ ದಿನಕ್ಕೆ ಕಾಲಿಟ್ಟಿದೆ. 2006ರಲ್ಲಿ 90 ದಿನ ತುಂಬಿದ್ದು ದಾಖಲೆಯಾಗಿತ್ತು. ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಆಗುತ್ತಿದ್ದು, ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಕುಶಾಲನಗರ, ಕೆಆರ್ ನಗರ, ಹುಣಸೂರು ವ್ಯಾಪ್ತಿಯಲ್ಲಿ ಮಳೆ ಶುರುವಾಗಿದ್ದು, ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸದ್ಯ 4 ಸಾವಿರ ಕ್ಯೂಸೆಕ್ ಇದ್ದರೂ, ಬೆಳಗ್ಗೆ ವೇಳೆಗೆ ಇದು 20 ಸಾವಿರ ಕ್ಯೂಸೆಕ್ ದಾಟುವ ಸಾಧ್ಯತೆ ಇದೆ.
ಇನ್ನು ಒಳ ಹರಿವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊರ ಹರಿವಿನ ಪ್ರಮಾಣ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ. ಅಂತೂ 2006ರ ನಂತರ ಕೆಆರ್‌ಎಸ್ ಅಣೆಕಟ್ಟು ದೀರ್ಘಾವದಿ ವರೆಗೆ ತುಂಬಿದ್ದು, ರೈತರಿಗೆ ಮತ್ತಷ್ಟು ಸಂತಸ ತಂದಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಆಗುತ್ತಿರುವ ತುಂತುರು ಮಳೆ ಮತ್ತಷ್ಟು ನೆಮ್ಮದಿ ತರಿಸಿದೆ.