ಮಂಡ್ಯ :ಲೋಕಸಭೆಯಲ್ಲಿ ಭರ್ಜರಿ ಗೆಲುವು ತಂದುಕೊಟ್ಟ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನೂತನ ಸಂಸದೆ ಸುಮಲತಾ ಅಂಬರೀಶ್ ನಾಳೆ ಮಂಡ್ಯದಲ್ಲಿ ಕೃತಜ್ಞತಾ ಸಮಾವೇಶ ಏರ್ಪಡಿಸಿದ್ದಾರೆ.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಮಧ್ಯಾಹ್ನದ ವೇಳೆಗೆ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ನಟರಾದ ಯಶ್, ದರ್ಶನ್, ದೊಡ್ಡಣ್ಣ, ರಾಕ್‌ಲೈನ್, ಅಂಬಿ ಪುತ್ರ ಅಭಿಷೇಕ್ ಸೇರಿದಂತೆ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೂ ಮೊದಲು ಚಿಕ್ಕರಸಿನಕೆರೆ ಕಾಲ ಬೈರವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು, ನಂತರ ನಗರಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ನಂತರ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಸಮಾವೇಶ ನಡೆಸಲಿದ್ದಾರೆ. ಸಮಾವೇಶಕ್ಕೆ ಕ್ಷೇತ್ರದ ಎಲ್ಲಾ ಕಡೆಯಿಂದ ಅಭಿನಾನಿಗಳು ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಅಂಬಿ ಹುಟ್ಟುಹಬ್ಬ ಆಚರಣೆ ಜೊತೆಗೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಂಸದೆ ಸುಮಲತಾ ಅಂಬರೀಶ್ ನಿರ್ಧಾರಿಸಿದ್ದಾರೆ
ಜೂನ್ 5ರ ನಂತರ ಜಿಲ್ಲಾ ಪ್ರವಾಸ ಕೈಗೊಳ್ಳಲು ಸುಮಲತಾ ನಿರ್ಧರಿಸಿದ್ದು, ಸಂಸತ್ ಅಧಿವೇಶನದ ನಂತರ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಎಲ್ಲ 8 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಪ್ರವಾಸದ ವೇಳೆ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿಯೂ ಜನರ ಬಳಿ ಚರ್ಚೆ ಮಾಡಲಿದ್ದಾರೆ.