ಮಂಡ್ಯ: ಭೂವರಹನಾಥ ದೇವಾಲಯಕ್ಕೆ ತೆರಳುವ ರಸ್ತೆಯನ್ನು ಬಂದ್ ಮಾಡಿದ್ದ ಕಿಡಿಗೇಡಿಗಳಿಗೆ ಕೆ.ಆರ್.ಪೇಟೆ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ರಸ್ತೆಗೆ ಹಾಕಿದ್ದ ಕಲ್ಲು, ಮಣ್ಣು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸಿ ಭಕ್ತರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕಲ್ಲಹಳ್ಳಿ ಬಳಿಯ ಕಾವೇರಿ ನದಿ ತಟದಲ್ಲಿ ಭೂ ವರಹನಾಥ ದೇವಾಲಯವಿದ್ದು, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಇರುವುದು ಒಂದೇ ರಸ್ತೆ. ಈ ರಸ್ತೆಯನ್ನು ಗ್ರಾಮದ ಕೆಲವರು ಬಂದ್ ಮಾಡಿ ಭಕ್ತರ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡಿದ್ದರು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ರಸ್ತೆ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದು, ಮುಂದೆ ಇಂತಹ ಕೃತ್ಯಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದಾರೆ. ನಂತರ ರಸ್ತೆಯಲ್ಲಿ ಸುರಿದಿದ್ದ ಮಣ್ಣು ಹಾಗೂ ಕಲ್ಲನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.