ಮಂಡ್ಯ: ಹಿಂದೆ ಮಂಜೂರು ಮಾಡಲಾಗಿದ್ದ ₹ 5 ಲಕ್ಷ ರೂಪಅಯಿ ವೆಚ್ಚದ ಆಟೋ ನಿಲ್ದಾಣ ಅಭಿವೃದ್ಧಿ ಕಾಮಗಾರಿ ಆರಂಭಿಸಿ, ನಂತರ ಸಂತೆ ಮೈದಾನ ಅಭಿವೃದ್ಧಿಪಡಿಸಿ ಎಂದು ರೈತ ಸಂಘದ ಕಾರ್ಯಕರ್ತರು ಕಾಮಗಾರಿ ಪೂಜೆಗೆ ಬಂದಿದ್ದ ಜೆಡಿಎಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡು ವಾಪಸ್ ಕಳಿಸಿರುವ ಘಟನೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು, ಗ್ರಾಮದ ಸಂತೆ ಮೈದಾನದ ಅಭಿವೃದ್ಧಿ ಕಾಮಗಾರಿಗೆ ರೈತಸಂಘದ ಕಾರ್ಯಕರ್ತರು ಅಡ್ಡಿಪಡಿಸಿ, ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆಟೋ ನಿಲ್ದಾಣದ ಅಭಿವೃದ್ಧಿಗೆ ₹ 5 ಲಕ್ಷ ಮಂಜೂರಾಗಿತ್ತು. ಆದರೆ ಪುಟ್ಟರಾಜು ಅವರು ಶಾಸಕರಾದ ಬಳಿಕ ಆ ಅನುದಾನವನ್ನ ತಡೆಹಿಡಿದಿದ್ದಾರೆ ಎಂದು ಆರೋಪಿಸಿ, ಆಟೋ ನಿಲ್ದಾಣದ ಅಭಿವೃದ್ಧಿಗೆ ಮೊದಲು ಚಾಲನೆ ನೀಡಿ. ಬಳಿಕ ಸಂತೆ ಮೈದಾನದ ಅಭಿವೃದ್ಧಿ ಕೈಗೆತ್ತಿಕೊಳ್ಳುವಂತೆ ರೈತ ಸಂಘದ ಕಾರ್ಯಕರ್ತರು ಪಟ್ಟು ಹಿಡಿದರು.
ಎಪಿಎಂಸಿ ಅನುದಾನದಡಿ ₹ 33 ಲಕ್ಷ ವೆಚ್ಚದಲ್ಲಿ ಸಂತೆ ಮೈದಾನದ ಅಭಿವೃದ್ಧಿ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ರೈತಸಂಘದ ಬಿಗಿಪಟ್ಟಿಗೆ ಗುದ್ದಲಿ ಪೂಜೆ ನೆರವೇರಿಸಲು ಸಾಧ್ಯವಾಗದೆ ಜೆಡಿಎಸ್ ಮುಖಂಡರು ವಾಪಸ್ ಆಗಿದ್ದಾರೆ. ಈ ವೇಳೆ ಜೆಡಿಎಸ್ ಮುಖಂಡರು ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹ ನಡೆದಿದೆ.