ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರಗಳಿಂದ ಹೆಚ್ಚಾಗಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರುಗಳ ನಡುವೆ ನಡೆಯುತ್ತಿರುವ ಮಾತಿನ ಯುದ್ಧ ಜೋರಾಗಿದೆ. ಇಷ್ಟು ದಿನ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಸುಮಲತಾ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದರು. ಆದರೆ, ಈಗ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಕೆ ಅನ್ನದಾನಿ ಸಹ ಸುಮಲತಾ ವಿರುದ್ಧ ಹರಿಹಾಯ್ದಿದ್ದಾರೆ.
ಮಂಡ್ಯ ಸಕ್ಕರೆ ಕಾರ್ಖಾನೆ ಆರಂಭವಾಗಲಿಕೆ ಸುಮಲತಾ ಒಬ್ಬರೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್ ಶಾಸಕರು ಪಾದಯಾತ್ರೆ ಹಾಗೂ ಹಲವಾರು ರೀತಿಯ ಪ್ರತಿಭಟನೆಗಳಿಂದಾಗಿ ಮಂಡ್ಯದ ಶುಗರ್ ಕಾರ್ಖಾನೆ ಆರಂಭವಾಯಿತು. ಆದರೆ, ಸಂಸದರು ತಾವೇ ಕಾರ್ಖಾನೆ ಆರಂಭಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವಲ್ಪವೂ ಜನರ ಬಗ್ಗೆ ಕಾಳಜಿ ಇಲ್ಲ. ಜನರು ತನ್ನನ್ನು ಎಲ್ಲಿ ಮರೆಯುತ್ತಾರೆ ಎಂದು ಆಗಾಗ ಜಿಲ್ಲೆಗೆ ಭೇಟಿ ನೀಡಿ ಹೋಗುತ್ತಾರೆ. ಯಾವುದೇ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಟೀಕಿಸಿದ್ದರು.
ಇದೇ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಸಂಸದೆ ಸುಮಲತಾ ಮಾತನಾಡಿ, ಜೆಡಿಎಸ್ ಶಾಸಕರಿಗೆ ಸವಾಲು ಹಾಕಿದರು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಮುಂದೆ ಆಣೆ-ಪ್ರಮಾಣ ಮಾಡಲು ನಾನು ರೆಡಿ ಇದ್ದೇನೆ. ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ ಎಂದು ವಾಗ್ದಾಳಿ ನಡೆಸಿದರು.
ದಾಖಲೆ ಸಮೇತ ಆಣೆ ಪ್ರಮಾಣ ಮಾಡೋಣ. ಯಾರು ಏನು ಅಂತಾ ಗೊತ್ತಾಗುತ್ತದೆ. ಯಾರು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ಸುಮ್ಮನೆ ಏನು ಆರೋಪ ಮಾಡಬಾರದು. ಭ್ರಷ್ಟಾಚಾರದ ಕುರಿತು ಅವರ ಬಳಿ ದಾಖಲಾತಿ ಇದ್ದರೆ ಕೊಡಲಿ.
ನಾನು ಬಹಿರಂಗ ಚರ್ಚೆಗೆ ಸಿದ್ದಳಿದ್ದೇನೆ ಎಂದು ಹೇಳಿದರು.
ಮಳವಳ್ಳಿ ಶಾಸಕ ಅನ್ನದಾನಿ ವಿರುದ್ಧ ಕಿಡಿಕಾರಿದ ಸಂಸದೆ, ಒಬ್ಬರು ಕುರಿತು ಮಾತನಾಡುವಾಗ ನೈತಿಕಥೆ ಇರಬೇಕು. ನಾನು ಕಮಿಷನ್ ಪಡೆಯೋಕೆ ಇಲ್ಲಿ ಎಂಪಿ ಆಗಿಲ್ಲ. ನಾನು ಅಂಬರೀಷ್ ಹೆಂಡತಿ. ನಮಗೆ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದ ತೊಂದರೆ ಇಲ್ಲ. ಹಣ ಮಾಡೋ ಅವಶ್ಯಕಥೆ ನಮಗಿಲ್ಲ ಎಂದರು.
ನಾನು ಕಮಿಷನ್ ಪಡೆದಿದ್ದೇನೆಂದು ಹೇಳತಾರಲ್ವಾ?. ನೇರವಾಗಿ ಸವಾಲು ಹಾಕುತ್ತಿರುವೆ, ಬನ್ನಿ ಮೇಲುಕೋಟೆಗೆ ಹೋಗೋಣ ಅಲ್ಲೇ ದೇವರ ಮುಂದೆ ಆಣೆ ಮಾಡಲಿ. ನನ್ನ ಬಗ್ಗೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕಳ್ಳೊದಿಲ್ಲ. ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕಬಹುದು ದಳಪತಿಗಳ ವಿರುದ್ದ ಸಂಸದೆ ಸುಮಲತಾ ಗುಡುಗಿದರು.
ಇದನ್ನೂ ಓದಿ: ಕುಂಬಳಕಾಯಿ ಕಳ್ಳರು ಎಲ್ಲಾ ಕಡೆ ಇದ್ರೆ ನಾನೇನು ಮಾಡಲಿ?: ಸಂಸದೆ ಸುಮಲತಾ