ಮಂಡ್ಯ: ಕ್ಷೇತ್ರದಲ್ಲಿ ಈಗ ಅಭ್ಯರ್ಥಿಗಳ ಮನೆಯ ಮಾತೇ ಆಗಿದೆ. ಯಾರು ಮನೆ ಮಾಡಿದರು, ಎಲ್ಲಿ ಮನೆ ಮಾಡಿದರು ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ರ ಮನೆಯದ್ದೇ ಚರ್ಚೆ ಆಗುತ್ತಿದೆ.
ಸುಮಲತಾ ಅಂಬರೀಶ್ ಕಳೆದ ರಾತ್ರಿ ಮನೆಯೊಂದನ್ನು ನೋಡಿ ಒಪ್ಪಿಗೆ ಸೂಚಿಸಿದ್ದಾರೆ. ಆ ಮನೆ ಬೇರೆ ಯಾವುದೂ ಅಲ್ಲ, ಅದು ಅಂಬರೀಶ್ಗೆ ಲಕ್ಕಿ ಮನೆ ಎಂದೇ ಬಿಂಬಿತವಾಗಿದ್ದ ಚಾಮುಂಡೇಶ್ವರಿ ನಗರದ ಮನೆ. 2013ರ ವಿಧಾನಸಭಾ ಚುನಾವಣೆ ವೇಳೆ ಈ ಮನೆಯಲ್ಲೇ ಅಂಬಿ ಇದ್ದರು. ಈ ಮನೆ ಮಾಡಿದ ನಂತರ ಸತತ ಎರಡು ಸೋಲಿನ ನಂತರ ಗೆಲುವು ಸಾಧಿಸಿದ್ದರು.
ಕಳೆದ ರಾತ್ರಿ ಅಂಬಿ ಇದ್ದ ಮನೆಯನ್ನೇ ನೋಡಿ ಗೃಹ ಪ್ರವೇಶದ ದಿನಾಂಕವನ್ನು ಸುಮಲತಾ ಅಂಬರೀಶ್ ಗುರುತು ಮಾಡಿದ್ದಾರೆ. ಆದರೆ ಇದನ್ನು ಸುಮಲತಾ ತಮ್ಮ ಕಚೇರಿಯನ್ನಾಗಿ ಮಾಡಲಿದ್ದಾರೆ. ತಮ್ಮ ಮಾವನ ಕಡೆಯಿಂದ ಬಂದಿರುವ ನಿವೇಶನದಲ್ಲೇ ಅವರು ಮನೆಯನ್ನ ಶೀಘ್ರವೇ ನಿರ್ಮಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಮಂಡ್ಯದ ಮಂಜುನಾಥ ನಗರದ 2ನೇ ಕ್ರಾಸ್ನಲ್ಲಿ 60*40ರ ಅಳತೆಯ ನಿವೇಶನವಿದೆ. ಅಲ್ಲಿ ಸ್ವಂತ ಮನೆಯನ್ನು ಶೀಘ್ರವಾಗಿ ನಿರ್ಮಾಣ ಮಾಡಲಿದ್ದಾರೆ. ಅಲ್ಲಿವರೆಗೂ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯನ್ನೇ ಕಚೇರಿ ಜೊತೆಗೆ ಮನೆಯನ್ನಾಗಿ ಮಾಡಿಕೊಳ್ಳಲಿದ್ದಾರೆ.
ಸದರಿ ಮನೆ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಸಂಬಂಧಿಗೆ ಸೇರಿದ್ದು ಎನ್ನಲಾಗಿದ್ದು, ಮನೆ ಮಾಲೀಕ ಹರೀಶ್ ಕುಮಾರ್ ಇದನ್ನು ಬಾಡಿಗೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಮನೆಯ ಗೃಹ ಪ್ರವೇಶ ನಡೆಯಲಿದೆ.
ಅಚ್ಚರಿ ಮೂಡಿಸಿದ ರಮೇಶ್ ಬಂಡಿಸಿದ್ದೇಗೌಡ ನಡೆ:
ಸಚಿವ ಡಿ.ಕೆ. ಶಿವಕುಮಾರ್ ಅವರು ಮೈತ್ರಿ ಧರ್ಮ ಪಾಲಿಸುವಂತೆ ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮಾಜಿ ಶಾಸಕರಿಗೆ ಸೂಚನೆ ನೀಡಿ ಕಳುಹಿಸಿದ್ದರು. ಆದರೆ ರಮೇಶ್ ಬಂಡಿಸಿದ್ದೇಗೌಡರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಅಂಬರೀಶ್ ಸೋಲಿಸಿ ಶಾಸಕರಾಗಿದ್ದ ರಮೇಶ್ ಬಂಡಿಸಿದ್ದೇಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೊತೆ ಕಾಂಗ್ರೆಸ್ ಸೇರಿದ್ದರು. ಈಗ ಸುಮಲತಾ ಜೊತೆ ಕಾಣಿಸಿಕೊಂಡಿರೋದು ಅಚ್ಚರಿ ಮೂಡಿಸಿದೆ.
ಕಳೆದ ರಾತ್ರಿ ಮನೆ ನೋಡಲು ಬಂದಿದ್ದ ಸುಮಲತಾ ಜೊತೆ ಕಾಣಿಸಿಕೊಂಡ ರಮೇಶ್ ಬಂಡಿಸಿದ್ದೇಗೌಡ, ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಬೆಂಬಲ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಸುಮಲತಾ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದೆ.