ಮಂಡ್ಯ: ಪುಲ್ವಾಮಾ ದುರುಂತದಲ್ಲಿ ಹುತಾತ್ಮರಾದ ಯೋಧ ಗುರು ಸಮಾಧಿ ಸ್ಥಳಕ್ಕೆ ನಟಿ ಸುಮಲತಾ ಅಂಬರೀಶ್ ಭೇಟಿ ನೀಡಿ ಗೌರವ ಸಮರ್ಪಿಸಿದರು.
ಪುತ್ರ ಅಭಿಷೇಕ್ ಜೊತೆ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯ ಆಗಮಿಸಿ ಹೊರ ಭಾಗದಲ್ಲಿರುವ ಸಮಾಧಿ ಸ್ಥಳಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ, ಗುರು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಗುರು ಪತ್ನಿ ಕಲಾವತಿಯನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದರು. ಈ ವೇಳೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಕಲಾವತಿಗೆ ಜೊತೆಯಲ್ಲಿರುವುದಾಗಿ ಭರವಸೆ ನೀಡಿದರು. ನಂತರ ಗುರುವಿನ ತಾಯಿಯನ್ನು ಅಪ್ಪಿಕೊಂಡು ಸಂತೈಸಿದರು. ಈ ಸಂದರ್ಭದಲ್ಲಿ ಕೆಲ ಕಾಲ ದುಖಿಃತರಾಗಿ ಕಣ್ಣೀರು ಸುರಿಸಿದರು.
ಇದಕ್ಕೂ ಮೊದಲು ತಮ್ಮ ಜಮೀನಿನ ಬಳಿ ತೆರಳಿದ ಸುಮಲತಾ, ಯಾವ ಕಡೆ ಯೋಧನ ಕುಟುಂಬಕ್ಕೆ ಜಮೀನು ನೀಡಬಹುದು ಎಂಬುದರ ಬಗ್ಗೆ ಪುತ್ರನ ಜೊತೆ ಸಮಾಲೋಚಿಸಿದರು. ಈ ವೇಳೆ ಸ್ಥಳೀಯರ ಜೊತೆ ಮಾತುಕತೆ ನಡೆಸಿದರು.ನಂತರ ಗುರು ಕುಟುಂಬದ ಜೊತೆ ಮಾತನಾಡಿ, ಎಲ್ಲಾ ಕಾರ್ಯಗಳು ಮುಗಿದ ನಂತರ ಭೇಟಿ ಮಾಡುವಂತೆ ಹೇಳಿ, ಕಾನೂನು ಪ್ರಕ್ರಿಯೆ ಮುಗಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.