ಮಂಡ್ಯ: ಹಾಲು ಮಿಶ್ರಿತ ನೀರು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಲೇಟ್ ಆಗ್ತಿಲ್ಲ, ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಾಥಮಿಕವಾಗಿ 6 ಜನ ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದು ನೀರು ಮಿಶ್ರಿತ ಹಾಲು ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಇಲಾಖೆಯಿಂದ ತನಿಖೆ ನಡೆಯುತ್ತಿದೆ. 2ದಿನದಲ್ಲಿ ರಿಪೋರ್ಟ್ ಬರಲಿದ್ದು, ಎಷ್ಟು ವರ್ಷದಿಂದ ಹಗರಣ ನಡೆದಿದೆ ಎಂಬುದನ್ನ ತಿಳಿಯಬೇಕು ಎಂದರು.
ನೀರು ಮಿಶ್ರಿತ ಹಾಲು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಆರೋಪಿಗಳು ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಎಸಗಿದ್ರೆ ಶಿಕ್ಷೆಗೆ ಒಳಪಡಿಸಲು ಸಿಎಂ ಸೂಚಿಸಿದ್ದಾರೆ. ರೈತರ ಸಂಸ್ಥೆಗೆ ಅನ್ಯಾಯವಾಗಬಾರದು. ಎರಡು ಮೂರು ದಿನಗಳಲ್ಲಿ ಪ್ರಕರಣದ ಸಂಪೂರ್ಣ ವರದಿ ಬರಲಿದೆ ಎಂದು ತಿಳಿಸಿದರು.
ಎಷ್ಟು ಕೋಟಿ ನಷ್ಟ ಆಗಿದೆ, ಅದಕ್ಕೆ ಕಾರಣ ಯಾರು, ಯಾರಿಂದ ರಿಕವರಿ ಮಾಡಬೇಕು ಎಂದು ಸಂಪೂರ್ಣ ವರದಿ ಬರುತ್ತದೆ. ಬಳಿಕ ಉನ್ನತ ತನಿಖೆಗೆ ಸೂಚಿಸಲಾಗುವುದು. ಪೊಲೀಸ್ ಇಲಾಖೆಗೂ ಕಟ್ಟುನಿಟ್ಟಿನ ಆದೇಶ ಇದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ. ರೈತರು ಕಷ್ಟಪಟ್ಟು ಹಾಲು ಹಾಕುತ್ತಾರೆ. ಇವರು ಅದಕ್ಕೆ ನೀರು ಬೆರೆಸಿ ಮೋಸ ಮಾಡಿದ್ರೆ ಸರ್ಕಾರ ಸುಮ್ಮನಿರಲ್ಲ. ಇದರಲ್ಲಿ ಆಡಳಿತ ಮಂಡಳಿ ಕೈವಾಡ ಇದ್ದರೆ ಸೂಪರ್ ಸೀಡ್ ಚಿಂತನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಇದೇ ರೀತಿ ಹಗರಣ ನಡೆದಿದೆ ಎಂಬ ಮಾತು ಕೇಳಿಬಂದಿತ್ತು. ಅಲ್ಲಿ ಬ್ಲ್ಯಾಕ್ ಲಿಸ್ಟ್ ಮಾಡಿ ಕಳುಹಿಸಲಾಗಿದೆ. ಹೀಗಾಗಿ ರಾಜ್ಯದ 14 ಒಕ್ಕೂಟಗಳಲ್ಲೂ ಟ್ಯಾಂಕರ್‌ಗಳ ಪರಿಶೀಲನೆ ನಡೆಸಲು ಚಿಂತನೆ ಮಾಡಲಾಗಿದೆ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಸೂಪರ್ ಸೀಡ್ ಒಂದೇ ಅಲ್ಲ, ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದರೆ ಅವರಿಗೂ ಶಿಕ್ಷೆಯಾಗುತ್ತದೆ. ಅಧಿಕಾರ ಕಿತ್ತುಕೊಳ್ಳುವುದು ನಮ್ಮ ಯೋಚನೆ ಅಲ್ಲ. ಆದ್ರೆ ಡೈರಿ ವಿಷಯದಲ್ಲಿ ಶಾಶ್ವತ ಪರಿಹಾರ ಕೊಡುವುದರ ಬಗ್ಗೆ ಚಿಂತನೆ ನಡೆದಿದೆ ಎಂದರು. ಈ ವೇಳೆ ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡದೆ ಸಚಿವರು ಮುಂದೆ ಸಾಗಿದರು.