ಮಂಡ್ಯ: ತನ್ನ ತಾಯಿಯ ಸಾವಿಗೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ನೆಹರೂ ನಗರದ ಕ್ರಿಶ್ಚಿಯನ್ ಕಾಲನಿಯ ನಿವೃತ್ತ ಶಿಕ್ಷಕಿ ವೀಣಾ ಜೋತಿನಿ (63) ಮತ್ತು ಇವರ ಮಗ ನಿತಿನ್ (32) ಮೃತರು. ಭಾನುವಾರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ವೀಣಾ ಮಗನ ಜತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ನಡುವೆ ಆರ್.ಪಿ ರಸ್ತೆಯಲ್ಲಿದ್ದ ತಮಗೆ ಸೇರಿದ್ದ ಆಸ್ತಿಯನ್ನು ಎರಡು ವರ್ಷದ ಹಿಂದೆ ಮಾರಾಟ ಮಾಡಿದ್ದರು. ಇದರಿಂದ ಬಂದಿದ್ದ ಹಣವನ್ನು ನಿತಿನ್ ಖರ್ಚು ಮಾಡಿದಲ್ಲದೇ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ. ಮಾತ್ರವಲ್ಲದೇ ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ ಎಂದು ಸಂಬಂಧಿಗಳು ಮತ್ತು ಸ್ನೇಹಿತರು ತಿಳಿಸಿದ್ದಾರೆ.
ಕ್ರಿಸ್‌ಮಸ್ ಹಬ್ಬವನ್ನು ತಾಯಿ-ಮಗ ಸಂಭ್ರಮದಿಂದ ಆಚರಿಸಿದ್ದರು. ಆದರೆ ಹೊಸ ವರ್ಷದ ಮೊದಲ ದಿನವೇ ವೀಣಾ ಜೋತಿನಿ ಅವರ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್‌ಗೆ ರವಾನಿಸಿದ್ದರು. ಆದರೆ ಇಂದು ಬೆಳಗ್ಗೆ ವಿ.ಸಿ. ಫಾರ್ಮ್ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ನಿತಿನ್ ಶವ ಪತ್ತೆಯಾಗಿದೆ. ಈ ಬಗ್ಗೆಯೂ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ಲಾರಿ ಚಕ್ರ ಸಿಡಿದು ಚಾಲಕ ಸಾವು