ಮಂಡ್ಯ: ಮೈಶುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭವಾಗುವುದು ಕೆಲವು ವ್ಯಕ್ತಿಗಳಿಗೆ ಇಷ್ಟವಿಲ್ಲ. ಅವರು ಈ ಬಗ್ಗೆ ಸಂಚು ರೂಪಿಸಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಮಂಗಲದ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಮತ್ತು ಪಾಂಡವಪುರದ ಈ ಎರಡು ಸಕ್ಕರೆ ಕಾರ್ಖಾನೆಗಳನ್ನು ತೆರೆಯಲು ಸಾಧ್ಯವಾಗದಂತೆ ಕೆಲವು ವ್ಯಕ್ತಿಗಳು ಸಂಚು ರೂಪಿಸಿ ಕಾರ್ಖಾನೆ ಪ್ರಾರಂಭವಾಗದಂತೆ ಹುನ್ನಾರ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಇದು ಗೌರವ ತರುವಂತಹ ಕೆಲಸವಲ್ಲ. ಬೇರೆಯವರು ಮಾಡುವಾಗ ಸಂತೋಷ ಪಡಬೇಕೆ ವಿನಃ ತಡೆಯಬಾರದು. ಈ ಎರಡು ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗದಂತೆ ತಡೆದಿರುವುದು ನಮ್ಮ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆಯಾದ ಚುನಾಯಿತ ಜನ ಪ್ರತಿನಿಧಿಗಳು ಐದು ವರ್ಷಕ್ಕೆ ಮಾತ್ರ ಮೀಸಲಾಗಿರುತ್ತಾರೆ. ಆದರೆ, ಜನತಾ ಪ್ರಭುಗಳೇ ಎಂದಿಗೂ ದೊಡ್ಡವರು. ನಿಮ್ಮ ವೈಯಕ್ತಿಕ ಚಟಕ್ಕೆ ಬಿದ್ದು ಸಾರ್ವಜನಿಕರ ಜೀವನದಲ್ಲಿ ಆಟವಾಡಬಾರದು. ನಾನು ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಈ ಜಿಲ್ಲೆಯ ಋಣ ನನ್ನ ಮೇಲಿದೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಈ ಸಂಬಂಧವಾಗಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಎರಡು ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.