ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ ಹೆಚ್ಚಿನ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು ಕಾವೇರಿ ನದಿತೀರದ ಹಲವು ದೇಗುಲಗಳು ನೀರಿನಲ್ಲಿ ಮುಳುಗಿವೆ. ಶ್ರೀರಂಗಪಟ್ಟಣದ ಪಶ್ವಿಮ ವಾಹಿನಿ ಬಳಿಯ ವೇಣುಗೋಪಾಲ ಸ್ವಾಮಿ ದೇಗುಲದ ಗರ್ಭ ಗುಡಿಗೆ ನೀರು ನುಗ್ಗಿದೆ.
ಶ್ರೀರಂಗಪಟ್ಟಣದ ಸೇತುವೆ ಬಳಿ ಇರುವ ಸಾಯಿ ಮಂದಿರ ಪ್ರವಾಹದ ನೀರಿನಿಂದ ಸಂಪೂರ್ಣ ಮುಳುಗಿದೆ. ಗಂಜಾಮ್ ಬಳಿಯ ಪ್ರಸಿದ್ಧ ನಿಮಿಷಾಂಭ ದೇಗುಲದ ಬಾಗಿಲವರೆಗೂ ನೀರು ತುಂಬಿದೆ. ಪ್ರವಾಸಿಗರು ನದಿಗಿಳಿಯದಂತೆ ಎಚ್ಚರ ವಹಿಸಲಾಗಿದೆ. ದೇಗುಲ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಿದ್ದು ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಡ್ಯಾಂ ಬಹುತೇಕ ಭರ್ತಿ: ಕೆಆರ್‌ಎಸ್ ಡ್ಯಾಂ ಬಹುತೇಕ ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯಕ್ಕೆ 123.40 ಅಡಿ ನೀರಿದೆ. 72,646 ಕ್ಯೂಸೆಕ್ ನೀರು ಒಳ ಹರಿವಿದೆ.
ಡ್ಯಾಂನಿಂದ 80,320 ಕ್ಯೂಸೆಕ್ ನೀರನ್ನು ನದಿಯ ಮೂಲಕ ಹೊರ ಬಿಡಲಾಗುತ್ತದೆ. 49.452 ಟಿಎಂಸಿ ಸಾಂದ್ರತೆ ಇರುವ ಕೆಆರ್‌ಎಸ್‌ನಲ್ಲಿ 47.516 ಟಿಎಂಸಿ ಸಂಗ್ರಹವಿದೆ. ಹೊರ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಕಾವೇರಿ ನದಿ ಪ್ರವಾಹದ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ರಾಘವೇಂದ್ರ ಸ್ವಾಮಿ ಜಪದಕಟ್ಟೆ ಜಲಾವೃತ