ಮಂಡ್ಯ: ಬೊಮ್ಮಾಯಿ ಸರ್ಕಾರ ಬಹಳ ದಿನ ಇರುತ್ತೆ ಅನ್ಸಲ್ಲ, ಅವರಾಗಿ ಅವರು ಬೀಳಬಹುದು ಎಂದು ಜಿಲ್ಲೆಯ ಮದ್ದೂರಿನಲ್ಲಿ ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಸರ್ಕಾರದ ಕುರಿತು ಭವಿಷ್ಯ ನುಡಿದಿದ್ದಾರೆ.
ನಾವು ಸರ್ಕಾರ ಬೀಳಿಸುವ ಪ್ರಯತ್ನ ಮಾಡಲ್ಲ. ಎಷ್ಟು ದಿನ ಇರುತ್ತೆ ಎಂದು ನಾನು ಜಾತಕ ಹೇಳಲ್ಲ. ಆದ್ರೆ ಬೊಮ್ಮಾಯಿ ಸರ್ಕಾರ ಬಹಳ ದಿನ ಇರುತ್ತೆ ಅನ್ಸಲ್ಲ ಎಂದರು. ಬಿಜೆಪಿ-ಜೆಡಿಎಸ್ ಅಡ್ಜೆಸ್ಟ್ಮೆಂಟ್ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ನವರು ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲದವರು. ಜೆಡಿಎಸ್ ಪಕ್ಷದವರು ಅವಕಾಶವಾದಿಗಳು. ಅಂತಹವರು ಯಾವಾಗ, ಏನು ಬೇಕಾದರೂ ಮಾತನಾಡ್ತಾರೆ.
ಅವರ ಉಳಿವಿಗಾಗಿ ಏನು ಬೇಕಾದರೂ ಮಾಡ್ತಾರೆ. ಅವರಿಗೆ ಯಾವುದೇ ತತ್ವ, ಸಿದ್ಧಾಂತ ಇಲ್ಲ. ಅವರ MLAಗಳನ್ನ ಉಳಿಸಿಕೊಳ್ಳಲು, ತಮ್ಮ ಕೆಲಸ ಮಾಡಿಸಿಕೊಳ್ಳಲು ಬಿಜೆಪಿ ಜೊತೆ ಚೆನ್ನಾಗಿರ್ತಾರೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಗೆ ಶೀಘ್ರವೇ ಜಾರಿಯಾಗಲಿ:
ಮೇಕೆದಾಟು ಪ್ರಾರಂಭ ಮಾಡಲು ಯಾವುದೇ ಅಡ್ಡಿ ಇಲ್ಲ, ಕಾನೂನಿನಲ್ಲೂ ಕೂಡ ಅಡ್ಡಿ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರನ್ನ ಕೇಳಿ ಮಾಡಬೇಕಾದಂತ ಅಗತ್ಯವಿಲ್ಲ. ಬಿಜೆಪಿಯವರಿಗೆ ಬದ್ಧತೆ ಇದ್ರೆ ಕೂಡಲೇ ಆ ಕೆಲಸ ಮಾಡಲಿ. ನಾವಿದ್ದಾಗಲೇ ಡಿಟೈಲ್ ಎಸ್ಟಿಮೇಷನ್ ಮಾಡಿ ಕಳಿಸಿದ್ದೆವು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಿ:
ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರು ಅಕ್ರಮ ಗಣಿಗಾರಿಕೆ ಮಾಡ್ತಾರೋ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. KRS ಡ್ಯಾಂಗೆ ತೊಂದರೆ ಇದ್ರೆ, ಅಂತಹ ಅಕ್ರಮ ಗಣಿಗಾರಿಕೆ ನಿಲ್ಲಿಸಲಿ. ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಹಳೆ ಮೈಸೂರು ಭಾಗಕ್ಕೆ ಬಿಜೆಪಿ ಕಡೆಗಣನೆ:
ಹಳೆ ಮೈಸೂರು ಪ್ರಾಂತ್ಯಕ್ಕೆ ಬಿಜೆಪಿ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯಕ್ಕೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ, ಆದ್ರೆ ಬಿಜೆಪಿಯವರು ಮೈಸೂರಿಗೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಹಳೆ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಹಳೆ ಮೈಸೂರು ಭಾಗವನ್ನ ಕಡೆಗಣನೆ ಮಾಡಿದೆ ಎಂದು ಕಿಡಿಕಾರಿದರು.
ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಆರಂಭಿಸುವಂತೆ ಒತ್ತಾಯ:
ಮಂಡ್ಯ ಮೈಶುಗರ್ ಕಾರ್ಖಾನೆ ಪ್ರಾರಂಭದ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಮೈಶುಗರ್ ಕಾರ್ಖಾನೆ ಸರ್ಕಾರದ ಒಡೆತನದಲ್ಲೇ ಇರಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕಾರಣಕ್ಕೂ ಮುಚ್ಚಲು ಬಿಡ್ತಿರಲಿಲ್ಲ. ಈ ಸರ್ಕಾರ ಕೂಡಲೇ ಕಾರ್ಖಾನೆ ಪ್ರಾರಂಭಿಸಬೇಕು. ಸರ್ಕಾರಿ ಸ್ವಾಮ್ಯದಲ್ಲೇ ಮೈಶುಗರ್ ಕಾರ್ಖಾನೆ ನಡೆಯಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಎಂದು ಒತ್ತಾಯಿಸಿದರು.
ಮೈಶುಗರ್ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ:
ಮೈಶುಗರ್ ಕಾರ್ಖಾನೆ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆ ಮಾಡುತ್ತೇನೆ. ನನಗೆ ಮನವಿಗಳು ಬಂದಿವೆ, ಸಾಧ್ಯವಾದರೆ ಸಭೆ ಕರೆಯುತ್ತೇನೆ. ಮೈಶುಗರ್ ಕಾರ್ಖಾನೆ ಸರ್ಕಾರವೇ ಇಟ್ಟುಕೊಳ್ಳಬೇಕು. ಯಾರಿಗೂ ಕೂಡ ಕಾರ್ಖಾನೆಯನ್ನ ಲೀಸ್ ಮಾಡಲು ಹೋಗಬಾರದು ಎಂದು ಆಗ್ರಹಿಸಿದರು.