ಮಂಡ್ಯ: ಯಾವುದೇ ಕಾರಣಕ್ಕೂ ನಮಲ್ಲಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗಿಲ್ಲ. 1 ಕೋಟಿ 20 ಲಕ್ಷ ಮಕ್ಕಳಲ್ಲಿ 102 ವಿದ್ಯಾರ್ಥಿಗಳಿಗೆ ಮಾತ್ರ ಸೋಂಕು ತಗುಲಿದೆ. ರೆಸಿಡೆನ್ಸಿ ಶಾಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ಓಪನ್ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೆ ಪಾಸಿಟಿವ್ ಬಂದಿಲ್ಲ. ಡಬಲ್ ಡಿಜಿಟ್ ಯಾವುದೇ ಜಿಲ್ಲೆಯಲ್ಲಿ ವರದಿಯಾಗಿಲ್ಲ. ಸೋಂಕು ತಗುಲಿರುವ ಮಕ್ಕಳು ಆರೋಗ್ಯಕರವಾಗಿದ್ದಾರೆ. ಯಾವುದೇ ರೀತಿಯ ಉದಾಸೀನ ಮಾಡದೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಶಾಲೆ ನಡೆಸುತ್ತಿದ್ದೇವೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲ ಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮೊಟ್ಟೆ ಕೊಡುವ ಯೋಜನೆಯನ್ನು ಜಾರಿ ಮಾಡಿದೆ. ತಜ್ಞರು ಸಲಹೆ ಮೇರೆಗೆ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ನೀಡಲಾಗುತ್ತಿದೆ. ಮೊಟ್ಟೆ ತಿನ್ನಲೇಬೇಕು ಎಂದು ನಾವು ಮಕ್ಕಳ ಮೇಲೆ ಒತ್ತಡ ಹೇರಿಲ್ಲ ಎಂದರು.
ಸದ್ಯ ಶಾಲೆ-ಕಾಲೇಜುಗಳನ್ನು ಬಂದ್ಮಾಡುವ ಯಾವುದೇ ಪ್ರಸ್ತಾವನೆ ನಮ್ಮುಂದೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.