ಮಂಡ್ಯ: ಐತಿಹಾಸಿಕ ಕೆ.ಆರ್.ಎಸ್ ಡ್ಯಾಂ ಸೇಫ್ಟಿ ದೃಷ್ಟಿಯಿಂದ ಹಿನ್ನೀರು ಪ್ರದೇಶವನ್ನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಜಲ ಸಂಪನ್ಮೂಲ ಇಲಾಖೆಯೇ ಇದೀಗ ನಿಯಮ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಡ್ಯಾಂನಿಂದ ಕೇವಲ 700 ಮೀಟರ್ ದೂರದಲ್ಲಿ ಸೈಲಿಂಗ್ ಸ್ಪರ್ಧೆ ಆಯೋಜನೆಗೆ ಅವಕಾಶ ನೀಡಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಡ್ಯಾಂನ 700 ಮೀಟರ್ ದೂರದಲ್ಲೇ ಮೈಸೂರಿನ ರಾಯಲ್ ಸೈಲಿಂಗ್ ಕ್ಲಬ್ಗೆ ಸೈಲಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಿದೆ. ಅದರಂತೆ ನಿನ್ನೆಯಿಂದ ಐದು ದಿನಗಳ ಕಾಲ ನ್ಯಾಷನಲ್ ಸೈಲಿಂಗ್ ಸ್ಪರ್ಧೆ ಆಯೋಜಿಸಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲ ಸಂಪನ್ಮೂಲ ಇಲಾಖೆ ಅನುಮತಿ ನೀಡುವಾಗ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಶಾಮಕ ದಳ, ಆರೋಗ್ಯ ಇಲಾಖೆಯಿಂದಲೂ ಒಪ್ಪಿಗೆ ಪತ್ರ ಪಡೆಯುವಂತೆ ಷರತ್ತು ವಿಧಿಸಿದೆ. ಷರತ್ತುಗಳನ್ನ ಪಾಲಿಸದೆ ಸ್ಪರ್ಧೆ ಆಯೋಜಿಸಿದ್ದು, ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿ ಸುರೇಶ್ ಬಾಬು ಪ್ರಶ್ನಿಸಿದಾಗ ಆಯೋಜಕ ಅರವಿಂದ್ ಶರ್ಮಾ ಎಂಬುವರು ಉದ್ಧಟತನದಿಂದ ವರ್ತಿಸಿ, ನಿಮ್ಮ ಕಚೇರಿಗೆ ಒಪ್ಪಿಗೆ ಪತ್ರ ಕಳುಹಿಸಿದ್ದೇನೆ ಎಂದು ಅಧಿಕಾರಿಯನ್ನು ವಾಪಸ್ ಕಳುಹಿಸಿದ್ದಾರೆ.
ತಡೆಯುವ ಪ್ರಯತ್ನ ಮಾಡಿಲ್ಲ : ಸ್ಪರ್ಧೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಾಗಲೂ ನಿರ್ಲಕ್ಷ್ಯತನ ಮಾಡಲಾಗಿದೆ. ಸ್ಪರ್ಧೆ ಆಯೋಜಿಸಿರುವ ಸ್ಥಳ ಮೈಸೂರು ವ್ಯಾಪ್ತಿಗೆ ಬರಲಿದೆ. ನಿನ್ನೆ ಹಾಗೂ ಇಂದು ಮೈಸೂರಿನಲ್ಲಿ ವೀಕ್ ಎಂಡ್ ಕರ್ಫ್ಯೂ ಜಾರಿಯಲ್ಲಿದ್ರೂ ಸಂಬಂಧಪಟ್ಟ ಅಧಿಕಾರಿಗಳು ತಡೆಯುವ ಪ್ರಯತ್ನ ಮಾಡಿಲ್ಲ. ಈ ಬಗ್ಗೆ ಆಯೋಜಕ ಅರವಿಂದ್ ಅವರನ್ನ ಪ್ರಶ್ನೆ ಮಾಡಿದ್ರೆ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಅನುಮಾನಕ್ಕೆ ಕಾರಣ : ಸಂಸದೆ ಸುಮಲತಾ ಅಂಬರೀಶ್ ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ನಂತರ ಡ್ಯಾಂ ಸೇಫ್ಟಿ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಸೈಲಿಂಗ್ ಚಟುವಟಿಕೆಗೆ ಅವಕಾಶ ನೀಡಿರೋದು ಅಧಿಕಾರಿಗಳು ಆಯೋಜಕರ ಪ್ರಭಾವಕ್ಕೆ ಹೆದರಿ ಅನುಮತಿ ನೀಡಿದ್ದಾರಾ? ಎಂಬ ಅನುಮಾನಕ್ಕೆ ಕಾರಣವಾಗಿದೆ.
ಓದಿ: ಅವನೇನು ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಯೋ.. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವಿರುದ್ಧ ಕಾಶಪ್ಪನವರ್ ಕಿಡಿ