ಮಂಡ್ಯ: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಹಂಕಾರ ತುಂಬಿದೆ. ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡಿದರೆ ಒಳ್ಳೆಯದು ಎಂದು ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದರು. ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರವಾಗಿ ಮದ್ದೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘‘ಇತ್ತೀಚಿಗೆ ಅವರ ಬೆಂಬಲಿಗರೇ ಅವರನ್ನು ಊರಿಂದ ವಾಪಸ್ ಹೋಗಿ ಅಂದಿದ್ದಾರೆ. ಆ ವಿಡಿಯೋವನ್ನು ನಾನು ನೋಡಿದ್ದೇನೆ. ಪಾಪ ಅವರು ಅಷ್ಟು ಉದ್ದಾರ ಆಗಿದ್ದಕ್ಕೆ ಬೆಂಬಲಿಗರು ವಾಪಸ್ ಕಳುಹಿಸಿದ್ರಾ ಎಂದು ಅವರನ್ನು ಮೊದಲು ಕೇಳಬೇಕು. ನಂತರ ನನ್ನ ಬಗ್ಗೆ ಮಾತನಾಡಲಿ ಎಂದು ಕಿಡಿಕಾರಿದರು.
ದುರಹಂಕಾರ ತುಂಬಿದಾಗ ಬ್ರೈನ್ ವರ್ಕ್ ಆಗಲ್ಲ: ರವೀಂದ್ರ ಶ್ರೀಕಂಠಯ್ಯ ಅವರಿಗೆ ಏನು ಮಾತನಾಡ್ತಿದ್ದಿವಿ ಅನ್ನೋ ಅರಿವಿಲ್ಲ. ಯೋಚನೆ ಮಾಡೋದಕ್ಕೆ ಮೈಂಡ್ನಲ್ಲಿ ಸ್ವಲ್ಪನು ಜಾಗ ಇಲ್ಲ.
ದುರಹಂಕಾರದ ಮಾತುಗಳನ್ನು ನಾನು ಸಿರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದು ಹೇಳಿದರು. ಜೆಡಿಎಸ್ ಪಕ್ಷದವರಿಗೆ ಅವರ ಕೆಲಸ ಬಿಟ್ಟು ಬೇರೆಯವರ ಚಿಂತೆ ಜಾಸ್ತಿ. ಯಾರ್ಯಾರು ಯಾರ ಜೊತೆ ಫೋನ್ ಸಂಪರ್ಕದಲ್ಲಿದ್ದಾರೆ, ಎಲ್ಲಿ ಯಾರನ್ನ ಭೇಟಿ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದೇ ಕೆಲಸವಾಗಿದೆ. ಈ ಕೆಲಸ ಬಿಟ್ಟು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡಿದ್ದರೆ ಅಭಿವೃದ್ಧಿ ಕಾಣುತ್ತಿತ್ತು, ಅದನ್ನ ಬಿಟ್ಟು ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡಿದೆರೆ ಒಳ್ಳೆಯದು ಎಂದು ಹೇಳಿದರು.
ಇದನ್ನೂ ಓದಿ : ಜೆಡಿಎಸ್ ಪಕ್ಷವನ್ನು ಇಬ್ರಾಹಿಂ ಹಳ್ಳಕ್ಕೆ ತಳ್ಳುತ್ತಿದ್ದಾರೆ: ಸಚಿವ ಅಶ್ವತ್ಥ್ ನಾರಾಯಣ್
ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲ್ಲ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ : ಸಂಸದೆ ಸುಮಲತಾ ಅಂಬರೀಶ್ ತಮ್ಮ ಬೆಂಬಲಿಗರ ಸಭೆ ವಿಚಾರವಾಗಿ ಮಾತನಾಡಿ, ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತೆ. ಚುನಾವಣೆಗೆ ಎಷ್ಟು ದಿನ ಇದೆ ಎನ್ನುವುದು ಮುಖ್ಯವಲ್ಲ. ಆದರೆ, ಅನುಕೂಲಕರ ವಾತಾವರಣ ಎಷ್ಟಿದೆ ಎಂಬುದು ಮುಖ್ಯ. ಹಾಗಾಗೀ ರಾಜ್ಯ ರಾಜಕಾರಣಕ್ಕೆ ಬರ್ತಿನಿ ಎಂಬುದನ್ನ ಹೇಳಲು ಇದು ಸಮಯವಲ್ಲ. ಆ ಸಮಯ ಬಂದಾಗ ನಾನು ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡ್ತೀನಿ ಎಂದು ತಿಳಿಸಿದರು.
ನಾನು ರಾಜಕೀಯಕ್ಕೆ ಬಂದಿರೋದೇ ಆಕಸ್ಮಿಕ, ನಾನು ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಇರಲು ಬಂದಿಲ್ಲ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಗಲಿ ರಾಜಕೀಯ ಪಕ್ಷ ಸೇರುವ ಬಗ್ಗೆ ಆಗಲಿ ಅಥವಾ ಸ್ವತಂತ್ರವಾಗಿ ಸ್ವರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ, ನಾನು ವೈಯಕ್ತಿಕ ಲಾಭದ ಬಗ್ಗೆ ಯೋಚನೆ ಮಾಡುವುದಿಲ್ಲ ಮತ್ತು ಅಧಿಕಾರಕ್ಕಾಗಿ ಆಸೆ ಪಡೆಲ್ಲ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಮಂಡ್ಯದಲ್ಲಿ ಅಲ್ಪಸಂಖ್ಯಾತರ ಸಮಾವೇಶ.. ಮುಸ್ಲಿಂ ಮತ ಸೆಳೆಯಲು ಶಾಸಕ ಪುಟ್ಟರಾಜು ಪ್ಲಾನ್