ಮಂಡ್ಯ : ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಎರಡನೇ ದಿನ ಶ್ರೀರಂಗನಾಥ ದೇಗುಲ ಮುಂಭಾಗದ ಶ್ರೀರಂಗ ವೇದಿಕೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್, ಸಂಜಿತ್ ಹೆಗ್ಗಡೆ ತಂಡದಿಂದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ, ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ ಹಾಡಿನ ಮೂಲಕ ಸಂಗೀತ ಕಾರ್ಯಕ್ರಮ ಆರಂಭಗೊಂಡಿತು. ಗಾಯಕ ರಾಜೇಶ್ ಕೃಷ್ಣನ್ ವಾಯ್ಸ್ಗೆ ಜನರು ಮನಸೋತರು.
ಕನ್ನಡ ನಾಡಿನ ಜೀವನದಿ ಸಾಂಗ್ ಮೂಲಕ ಜನರ ಕಿವಿಗೆ ಇಂಪನ್ನು ತಂದು ಕರುನಾಡ ತಾಯಿ ಸದಾ ಚಿನ್ಮಯಿ ಸಾಂಗ್ಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದರು. ಕಾವೇರಮ್ಮ ಕಾಪಾಡಮ್ಮ ರಾಜೇಶ್ ಕೃಷ್ಣನ್ ಹಾಡಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಹಾಡು, ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ, ಮಾತು ನೀಡುತ್ತಾಳೆ ಕನ್ನಡ ತಾಯಿ, ಪಾಪ ಕಳೆಯುತ್ತಾಳೆ ಕಾವೇರಿ ತಾಯಿ ಹಾಡನ್ನು ರಾಜೇಶ್ ಕೃಷ್ಣನ್ ಮೆಲೋಡಿಯಸ್ ವಾಯ್ಸ್ ಕೇಳಿ ಶ್ರೀರಂಗಪಟ್ಟಣ ಜನರು ಫಿದಾ ಆದರು.
ಅಮೆರಿಕ ಅಮೆರಿಕ ಸಿನಿಮಾದ ನೂರು ಜನ್ಮಕೂ ನೂರಾರು ಜನ್ಮಕೂ ಒಲವಾ ಧಾರೆಯೇ ಸಾಂಗ್, ಸುದೀಪ್ ನಟನೆಯ ಸಿನಿಮಾದ ಉಸಿರೆ ಉಸಿರೆ ನೀ ಉಸಿರ ಕೊಲ್ಲಬೇಡ, ಪ್ರೀತಿ ಹೆಸರಲ್ಲಿ ಈ ಹೃದಯಗೆಲ್ಲಬೇಡ ಹಾಡಿನ ಮೂಲಕ ರಾಜೇಶ್ ಕೃಷ್ಣನ್ ಮತ್ತಷ್ಟು ಮನರಂಜಿಸಿದರು.
ಹೆಸರಾಂತ ಗಾಯಕ ಎಸ್ಪಿಬಿ ಹಾಡಿರೋ ಈ ಭೂಮಿ ಬಣ್ಣದ ಬುಗುರಿ ಹಾಡಿಗೆ ರಾಜೇಶ್ ಕೃಷ್ಣನ್ ಜೀವ ತುಂಬಿದರು. ಬಳಿಕ ಕಚುಕು ಕುಚುಕು ಚಡ್ಡಿ ದೋಸ್ತಿ ಕಣೋ ಕುಚುಕು ಸಾಂಗ್ ಮೂಲಕ ದಸರಾ ಕಳೆಗೆ ಮತ್ತಷ್ಟು ರಂಗು ತಂದರು.