ಮಂಡ್ಯ : ಯಾರು ಅನಾಥರಲ್ಲ. ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ ಎನ್ನುವ ಮಾನವೀಯತೆಯಿಂದ ಕೋವಿಡ್‌ನಿಂದ ಮೃತರಾದವರಿಗೆ ಗೌರವಯುತವಾಗಿ ಶವ ಸಂಸ್ಕಾರ ಮಾಡಿದ್ದೇವೆ. ಇಂದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಮೂಹಿಕ ಪಿಂಡ ಪ್ರಧಾನ ಮಾಡಿದೆವು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಇಂದು ಶ್ರೀರಂಗಪಟ್ಟಣ ತಾಲೂಕಿನ ಗೋಸಾಯಿ ಘಾಟ್ನಲ್ಲಿ ಕೊರೊನಾ ವೈರಸ್ನಿಂದ ಮೃತರಾದವರ ಆತ್ಮಕ್ಕೆ ಶಾಂತಿ ದೊರಕಿಸಲು ಪಿಂಡ ಪ್ರಧಾನ ಮಾಡಲಾಗುತ್ತಿದೆ. ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದೇಶದಲ್ಲಿ ಸರ್ಕಾರದ ವತಿಯಿಂದ ಅಸ್ಥಿ ಪ್ರಧಾನ ಮಾಡುತ್ತಿದ್ದೇವೆ ಎಂದರು.
ಜಿಲ್ಲಾಡಳಿತ ಹಾಗೂ ಜ್ಯೋತಿಷಿ ವೇದಬ್ರಹ್ಮ ಡಾ. ವಿ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪಿಂಡ ಪ್ರಧಾನಕ್ಕೆ ರೂಪರೇಷ ಸಿದ್ಧಪಡಿಸಿಕೊಂಡು ಧಾರ್ಮಿಕ ಕಾರ್ಯಗಳಿಗೆ ಅಡಿಯಾಗಿ, ಸಾಮೂಹಿಕವಾಗಿ ಪ್ರೇತ ಸಂಸ್ಕಾರ, ನಾರಾಯಣ ಬಲಿ ಬಳಿಕ ಎಡೆ ಪೂಜೆಯನ್ನು ನೆರವೇರಿಸಿದರು. ನಂತರ ತಿಲತರ್ಪಣದೊಂದಿಗೆ ಪಿಂಡಪ್ರಧಾನವನ್ನು ಕಾವೇರಿ ನದಿಯಲ್ಲಿ ಸಲ್ಲಿಸಿದರು.
ಹಿಂದೆ ಪುರಾತನ ಕಾಲದಲ್ಲಿ ಪ್ರವಾಹ, ನೆರೆ ಹಾವಳಿ, ಇತರೆ ಸಾಂಕ್ರಾಮಿಕ ರೋಗಗಳು ಬಂದು ಜನರು ಬಲಿಯಾದಾಗ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ವಿಧಿ-ವಿಧಾನಗಳ ಮೂಲಕ ಸಾಮೂಹಿಕ ಪಿಂಡ ಪ್ರಧಾನವನ್ನು ಮಾಡಲಾಗುತ್ತಿತ್ತು. ಕೋವಿಡ್‌ನಿಂದ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ಸಹ ಈ ಕಾರ್ಯವನ್ನು ಮಾಡಿದೆವು ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಕೋವಿಡ್‌ನಿಂದ ಮೃತವಾದ ಅನೇಕ ಶವಗಳು ಗಂಗಾನದಿಯಲ್ಲಿ ತೇಲಿ ಹೋಗಿರುವುದನ್ನು ಗಮನಿಸಿರಬಹುದು. ಬಲಿಯಾದ ಅನೇಕ ಶವಗಳಿಗೆ ವಾರಸುದಾರರಿಲ್ಲ. ಚಿಕ್ಕ-ಚಿಕ್ಕ ಮಕ್ಕಳು ಪಿಂಡ ಪ್ರಧಾನ ಮಾಡಲಾಗುತ್ತಿಲ್ಲ. ಆತ್ಮಗಳು ಭೂತ-ಪ್ರೇತಾತ್ಮಗಳಾಗಿ ಅಲೆಯದೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿಂಡ ಪ್ರಧಾನವನ್ನು ನೆರವೇರಿಸಲಾಯಿತು ಎಂದರು.
ಕೋವಿಡ್ 2ನೇ ಅಲೆಯಲ್ಲಿ ಮೃತಪಟ್ಟವರ ಅಸ್ಥಿಗಳನ್ನು ಮೃತರ ಸಂಬಂಧಿಕರು ಪಡೆಯಲು ಮುಂದೆ ಬಾರದ ಹಿನ್ನೆಲೆ ಸರ್ಕಾರದಿಂದಲೇ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಬಳಿಕ ಅವರ ಅಸ್ಥಿಯನ್ನು ಸಂಪ್ರದಾಯಬದ್ಧವಾಗಿ ಬೆಳಕವಾಡಿ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಬಳಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು ಎಂದು ತಿಳಿಸಿದರು.
ವೈರಸ್ನಿಂದ ಮೃತರಾದ ವಾರಸುದಾರರಿಲ್ಲದ 1000ಕ್ಕೂ ಅಧಿಕ ಜನರ ಅಸ್ಥಿಯನ್ನು ವಿಸರ್ಜನೆ ಮಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಓದಿ: ಮೌಢ್ಯಕ್ಕೆ ಸೆಡ್ಡು.. ಅ.7ರಂದು ಚಾಮರಾಜನಗರಕ್ಕೆ ಸಿಎಂ.. ಸಮಾಜವಾದಿ ಮೂಲದ ಬೊಮ್ಮಾಯಿಗೆ ಸಿದ್ದು ಮಾದರಿ..