ಮಂಡ್ಯ: ಕಾವೇರಿ ಹೋರಾಟದಲ್ಲಿ ಕೂಡಲ ಸಂಗಮ ಮಠದ ಶ್ರೀಗಳು ಶುಕ್ರವಾರ ಭಾಗಿಯಾದರು. ಕೆಲ ದಿನಗಳಿಂದ ಸಪ್ಪೆಯಾಗಿದ್ದ ಕಾವೇರಿ ಚಳವಳಿಯನ್ನು ತೀವ್ರಗೊಳಿಸಲು ಹೋರಾಟಗಾರರು ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ಮಂಡ್ಯ ಸಮೀಪದ ಇಂಡುವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಂದ ನೂರಾರು ಜನರು ತಮ್ಮ ಎತ್ತಿನಗಾಡಿಗಳು, ಟ್ರ್ಯಾಕ್ಟರ್ ಮೂಲಕ ಮಂಡ್ಯದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ಕೂಡಲ ಸಂಗಮ ಮಠದ ಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮೀಜಿ ಸಂಜಯ ವೃತ್ತದಿಂದ ರೈತರ ಜೊತೆ ಎತ್ತಿನಗಾಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಉತ್ತರ ಕರ್ನಾಟಕದ ಎಲ್ಲಾ ಧಾರ್ಮಿಕ ಮುಖಂಡರ ಪರವಾಗಿ ಇಲ್ಲಿಗೆ ಬಂದಿದ್ದೇನೆ. ಕಾವೇರಿ ಕೃಷ್ಣೆ ನಮ್ಮ ಕಣ್ಣುಗಳಿದ್ದಂತೆ. ಕಾವೇರಿ ಋಣ ಲಕ್ಷಾಂತರ ಮಂದಿಯ ಮೇಲೆ ಇದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗಿಲ್ಲ, ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಪ್ರಾಧಿಕಾರದ ಸದಸ್ಯರು ಅವೈಜ್ಞಾನಿಕ ತೀರ್ಪುಗಳನ್ನು ನೀಡುತ್ತಿದ್ದಾರೆ. ಆದೇಶ ಪಾಲನೆಯ ಹೆಸರಿನಲ್ಲಿ ನೀರು ನೀಡುತ್ತಿರುವುದು ದೊಡ್ಡ ತಪ್ಪು. ಈ ಹಿಂದೆ ನೀಡಿದ್ದ ತೀರ್ಪು ಅಂದಿನ ಕಾಲದ ಜನಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ಕೊಡಲಾಗಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಬೆಂಗಳೂರಿನ ಜನಸಂಖ್ಯೆ 5 ಪಟ್ಟು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಹಳೆಯ ತೀರ್ಪನ್ನೇ ಗಮನದಲ್ಲಿಟ್ಟುಕೊಂಡು ನೀರು ಬಿಡ್ರಿ ಬಿಡ್ರಿ ಅಂದ್ರೆ ಎಲ್ಲಿಂದ ಬಿಡೋದು.
ಈ ಆದೇಶವೇ ಪಕ್ಷಪಾತವಾಗಿದೆ ಎಂಬುದು ಕಂಡು ಬರುತ್ತಿದೆ. ಸರ್ಕಾರದ ಮೇಲೆ ಜವಾಬ್ದಾರಿ ಹೆಚ್ಚಿದೆ. ಅಧಿಕಾರಕ್ಕಿಂತ ಕಾವೇರಿ ಮುಖ್ಯ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಸಿದ್ದರಾಮಯ್ಯ ಅವರ ನಡೆ ರೈತರಿಗೆ ಬಹಳಷ್ಟು ನೋವು ಉಂಟುಮಾಡಿದೆ. ಜಂಟಿ ಅಧಿವೇಶನದ ಮೂಲಕ ಸುಗ್ರೀವಾಜ್ಞೆ ಜಾರಿಗೆ ತನ್ನಿ. ಹಿಂದಿನ ಒಪ್ಪಂದವನ್ನು ತಿದ್ದುಪಡಿ ಮಾಡುವ ಅವಕಾಶ ಸರ್ಕಾರಕ್ಕೆ ಇದೆ. ಪ್ರತಿಯೊಬ್ಬನಿಗೂ ಕುಡಿಯುವ ನೀರಿನ ಹಕ್ಕಿದೆ. ಅದನ್ನು ಅರಿತು ಪ್ರಧಾನಿಗಳು ರಾಷ್ಟ್ರೀಯ ಜಲ ನೀತಿ ಜಾರಿಗೆ ತರಬೇಕು. ಕಾವೇರಿ ಕೃಷ್ಣೆ ಹಾಗೂ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ನೀರಿನ ವಿಚಾರಕ್ಕೆ ನೀವು ರಾಜಕೀಯ ಮಾಡಿದ್ದೇ ಆದಲ್ಲಿ ನೀವು ಖಂಡಿತ ರೈತರ ಶಾಪಕ್ಕೆ ಗುರಿಯಾಗುತ್ತೀರಿ. ಪ್ರಾಮಾಣಿಕ ಹಾಗೂ ಒಗ್ಗಟಿನ ಪ್ರದರ್ಶನ ಮಾಡಿ. ಇಲ್ಲವಾದಲ್ಲಿ ರೈತರೇ ನಿಮ್ಮ ಮನೆಬಾಗಿಲ ಮುಂದೆ ಬರಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಕಾರ್ಯಕರ್ತರಿಂದ ವಿನೂತನ ಹೋರಾಟ: ಕಾವೇರಿ ಮೇಲೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ವಕ್ರದೃಷ್ಟಿ ಬಿದ್ದಿದೆ. ಇಂಡಿಯಾ ಮೈತ್ರಿ ಕೂಟ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೂಡ ಕೆಟ್ಟ ದೃಷ್ಟಿ ಬಿಟ್ಟಿದ್ದಾರೆ. ಕಾವೇರಿ ಮೇಲೆ ಬಿದ್ದಿರುವ ಕೆಟ್ಟ ಕಣ್ಣುಗಳು ದೂರವಾಗಲಿ. ಮುಂದೆಯೂ ಯಾರ ಕೆಟ್ಟ ಕಣ್ಣುಗಳು ಬೀಳದಿರಲಿ ಎಂದು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಬಳಿಕ ಬೂದುಗುಂಬಳದಿಂದ ಇಳಿ ತೆಗೆದು ಪ್ರಾರ್ಥಿಸಿ ವಿನೂತನ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಮಂಡ್ಯ: ಖಾಲಿ ಕೊಡ ಹಿಡಿದು ಕಾವೇರಿ ನೀರಿಗಾಗಿ ರೈತರ ಹೋರಾಟ