ಮೈಸೂರು: ರಾಜ್ಯದ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಕಗ್ಗಂಟಾದ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ಒಕ್ಕಲಿಗರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಗರದ ಬಂದಂತಮ್ಮ ಕಾಳಮ್ಮ ದೇವಾಲಯದಲ್ಲಿ ಆದಿ ಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟಿಸಿದ ಒಕ್ಕಲಿಗ ಸಮುದಾಯದ ಮುಖಂಡರು ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಒಕ್ಕಲಿಗ ಮುಖಂಡ ಮೋಹನ್ ಕುಮಾರ್ ಗೌಡ ಮಾತನಾಡಿ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ 130 ಸ್ಥಾನ ಗಳಿಸಲು ಬಹಳ ಹೋರಾಟ ನಡೆಸಿದ್ದಾರೆ. ಪಕ್ಷದಲ್ಲಿ ಕಿರಿಯರು ಹಾಗೂ ಹಿರಿಯರು ಇಬ್ಬರನ್ನೂ ಒಮ್ಮತದಿಂದ ಕರೆದೊಯ್ಯುವಲ್ಲಿ ಅವರ ಪಾತ್ರ ಹೆಚ್ಚಿದೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಇಷ್ಟೊಂದು ಶ್ರಮ ವಹಿಸಿರುವ ಅವರಿಗೆ ಸಿಎಂ ಸ್ಥಾನ ನೀಡಬೇಕೆಂಬುದು ಸಮುದಾಯದ ಕೂಗಾಗಿದೆ ಎಂದು ಹೇಳಿದರು.
ಒಕ್ಕಲಿಗ ಸಂಘದ ನಿರ್ದೇಶಕ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ, ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ಮುನ್ನಡೆಸಿ ಈ ಹಂತಕ್ಕೆ ತಂದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಪಕ್ಷ ಬಲಿಷ್ಠಗೊಳಿಸುವಲ್ಲಿಯೂ ಅವರದೇ ಪಾಲು ಹೆಚ್ಚಿದೆ. ಇದೆಲ್ಲಾ ಕಾರಣ ಪರಿಗಣಿಸಿ ಪಕ್ಷ ಅವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರದ ಒಂದು ಸಾಲಿನ ನಿರ್ಣಯವನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ: ಸುರ್ಜೇವಾಲ
ಒಕ್ಕಲಿಗರ ಹಿತಚಿಂತಕ ಶಂಕರ್, ಟಿ. ರವಿ ಗೌಡ, ರಾಜು, ಸುರೇಶ್. ಸಿ ರಮೇಶ್, ಎಂ ಮೋಹನ್ ಕುಮಾರ್ ಗೌಡ, ಬಂದಂತಮ್ಮ ಕಾಳಮ್ಮ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ್, ಶಂಭು, ರವೀಂದ್ರ, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಶ್ರೀನಿವಾಸ್, ವಕೀಲರಾದ ಕೃಷ್ಣ, ಬಸವರಾಜ್, ದಿನೇಶ್, ಜಗ್ಗೇಶ್ ಇನ್ನಿತರರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಡಿಸಿಎಂ ಸ್ಥಾನ ನೀಡಬೇಕು: ಮಲ್ಲಿಕಾರ್ಜುನ ಶ್ರೀಗಳ ಆಗ್ರಹ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ವಿಶೇಷ ಪೂಜೆ: ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವೂ ಬೆಂಬಲಿಗರು ಪೂಜೆ ಸಲ್ಲಿಸುವ ಮೂಲಕ ಅವರೇ ಸಿಎಂ ಆಗಬೇಕೆಂದು ಒತ್ತಾಯಿಸಿದ್ದಾರೆ. ದಾವಣಗೆರೆ ಶಕ್ತಿ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಕುರುಬ ಸಮುದಾಯದವರಿಂದ ಸಿದ್ದರಾಮಯ್ಯ ಈ ಬಾರಿ ಮುಖ್ಯಮಂತ್ರಿ ಆಗಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದಲ್ಲದೆ ದುರ್ಗಾಂಬಿಕಾ ದೇವಿಯ ಪಕ್ಕ ಸಿದ್ದರಾಮಯ್ಯ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಆವರಣದಲ್ಲಿ 101 ತೆಂಗಿನಕಾಯಿಗಳನ್ನು ಒಡೆದರು. ಎಲ್ಲಾ ಸಮುದಾಯದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಉತ್ತಮ ಆಡಳಿತ ನಡೆಸಿದ್ದಾರೆ. ಆದ್ದರಿಂದ ಮೊದಲ ಅವಧಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಲಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ, ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ: ಡಿಕೆಶಿ