ಮಂಡ್ಯ: ನಗರದ ಸಂಜಯ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಡಿಯರ್ ಕಾಮ್ರೆಡ್ ಚಿತ್ರದ ಕನ್ನಡ ಆವೃತ್ತಿ ಪ್ರಸಾರ ಮಾಡುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಿದರು. ಚಿತ್ರಮಂದಿರದ ಎದುರು ಪ್ರತಿಭಟನೆ ಮಾಡಿ ಚಿತ್ರಮಂದಿರದ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ಕನ್ನಡ ಆವೃತ್ತಿ ಇದ್ದರೂ ತೆಲುಗು ಭಾಷೆಯ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 90ರಷ್ಟು ಜನರು ಕನ್ನಡಿಗರೇ ಇದ್ದರೂ ತೆಲುಗು ಭಾಷೆಯ ಚಿತ್ರ ಪ್ರದರ್ಶನ ಯಾಕೆ ಎಂದು ಪ್ರಶ್ನೆ ಮಾಡಿದರು.
ಕೂಡಲೇ ಚಿತ್ರ ವಿತರಕರು ಕನ್ನಡ ಭಾಷೆಯ ಆವೃತ್ತಿ ಬಿಡುಗಡೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ಇಲ್ಲವಾದರೆ ಹೋರಾಟ ಮಾಡುವುದಾಗಿ ತಿಳಿಸಿ ಮನವಿ ಸಲ್ಲಿಸಿದರು.